ಅಮರಾವತಿ: 'ನಿವೃತ್ತಿ ನಂತರ ಸರ್ಕಾರದ ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಸಮಾಲೋಚನೆ ಮತ್ತು ಮಧ್ಯಸ್ಥಿಕೆಯ ವೃತ್ತಿಯಲ್ಲಿ ಮುಂದುವರಿಯುವೆ' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದ್ದಾರೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಲ್ಲಿ ಸ್ಥಾಪಿಸಲಾಗಿರುವ ದಿ.ಟಿ.ಆರ್. ಗಿಲ್ಡಾ ಸ್ಮಾರಕ ಇ-ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.
'ನ. 23ರಂದು ನಾನು ನಿವೃತ್ತನಾಗುತ್ತಿದ್ದೇನೆ. ನಂತರದಲ್ಲಿ ಯಾವುದೇ ಸರ್ಕಾರದ ಹುದ್ದೆಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಈ ಹಿಂದೆಯೂ ಹೇಳಿದ್ದೆ' ಎಂದಿದ್ದಾರೆ.
ಅಮರಾವತಿಯ ದಾರಾಪುರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಬಿಹಾರ ಮತ್ತು ಕೇರಳದ ರಾಜ್ಯಪರೂ ಆಗಿದ್ದ ತಮ್ಮ ತಂದೆ ಆರ್.ಎಸ್. ಗವಾಯಿ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಗ್ರಾಮದಲ್ಲಿ ನಡೆದ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ಇಡೀ ಕುಟುಂಬ ಪಾಲ್ಗೊಂಡಿತ್ತು.
ದಾದಾಸಾಹೇಬ್ ಗವಾಯಿ ಎಂದೇ ಕರೆಯಲಾಗುತ್ತಿದ್ದ ಆರ್.ಎಸ್. ಗವಾಯಿ ಅವರ ಹೆಸರನ್ನು ಗ್ರಾಮದ ದ್ವಾರಕ್ಕೆ ಇಡಲಾಗಿದೆ.

