ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಸ್ಪೆಷಲ್ ಇಂಟೆನ್ಸಿವ್ ರಿವಿಜನ್) ಮಾಡುವುದನ್ನು ಮುಂದುವರಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ವಿಚಾರಣೆ ನಡೆಸಿತು.
'ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ನ್ಯಾಯದ ಹಿತದೃಷ್ಟಿಯಿಂದ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಪರಿಗಣಿಸಬೇಕು' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದಕ್ಕೂ ಮುನ್ನ ಮತದಾರರ ಪಟ್ಟಿಯ ಪರಿಷ್ಕರಣೆಗೆ ಆಧಾರ್ ಕಾರ್ಡ್ ಅನ್ನು ಏಕೆ ಪರಿಗಣಿಸುತ್ತಿಲ್ಲ ಎಂದು ನ್ಯಾಯಪೀಠ ಚುನಾವಣಾ ಆಯೋಗವನ್ನು ಪ್ರಶ್ನಿಸಿತ್ತು.
ಈ ಕುರಿತು ಚುನಾವಣಾ ಆಯೋಗದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ, 'ಆಧಾರ್ ಕಾರ್ಡ್ ಅನ್ನು ಪೌರತ್ವಕ್ಕೆ ಪುರಾವೆಯಾಗಿ ಪರಿಗಣಿಸುತ್ತಿಲ್ಲ. ಹಾಗೆಯೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಆಕ್ಷೇಪಣೆ ಹೊಂದಿರುವುದಾಗಿ' ತಿಳಿಸಿದ್ದರು.
ರಾಕೇಶ್ ದ್ವಿವೇದಿ ಜತೆಗೆ, ಹಿರಿಯ ವಕೀಲರಾದ ಕೆ.ಕೆ.ವೇಣುಗೋಪಾಲ್ ಮತ್ತು ಮಣಿಂದರ್ ಸಿಂಗ್ ಅವರು ಚುನಾವಣಾ ಆಯೋಗದ ಪರವಾಗಿ ವಾದ ಮಂಡಿಸಿದ್ದಾರೆ.
ಅರ್ಜಿದಾರರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ ಶಂಕರನಾರಾಯಣ, 'ಬಿಹಾರದಲ್ಲಿ ಸುಮಾರು 8 ಕೋಟಿ ಮತದಾರರಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆಗೆ ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ಅನುಮತಿ ನೀಡಬಹುದಿತ್ತು. ಸದ್ಯ ಚುನಾವಣಾ ಆಯೋಗದ ಅಧಿಕಾರಿಗಳು ಆಧಾರ್ ಕಾರ್ಡ್ ಮತ್ತು ಮತದಾರ ಗುರುತಿನ ಚೀಟಿಯನ್ನು ದಾಖಲೆಯಾಗಿ ಸ್ವೀಕರಿಸುತ್ತಿಲ್ಲ' ಎಂದಿದ್ದಾರೆ.
ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್, ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಆರ್‌ಜೆಡಿ ಸಂಸದ ಮನೋಜ್ ಝಾ, ಸಮಾಜವಾದಿ ಪಕ್ಷದ ಹರಿಂದರ್ ಸಿಂಗ್ ಮಲಿಕ್, ಶಿವಸೇನಾ (ಯುಬಿಟಿ) ನಾಯಕ ಅರವಿಂದ್ ಸಾವಂತ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಅನೇಕರು ಆಯೋಗದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಜೂನ್ 24ರಂದು ಚುನಾವಣಾ ಆಯೋಗ ಹೊರಡಿಸಿರುವ ಆದೇಶವು ಸಂವಿಧಾನದ 14, 21, 325 ಮತ್ತು 326ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. 1950ರ ಜನ ಪ್ರಾತಿನಿಧ್ಯ ಕಾಯ್ದೆ ಮತ್ತು 1960ರ ಮತದಾರರ ನೋಂದಣಿ ನಿಯಮಗಳ ನಿಯಮ 21ಎ ನಿಬಂಧನೆಯನ್ನೂ ಉಲ್ಲಂಘಿಸುತ್ತದೆ ಎಂದು ಅರ್ಜಿಗಳಲ್ಲಿ ವಾದಿಸಲಾಗಿದೆ.




