ಲಖನೌ: ಉತ್ತರ ಪ್ರದೇಶದಲ್ಲಿ ಧಾರ್ಮಿಕ ಮತಾಂತರ ದಂಧೆಯಲ್ಲಿ ಭಾಗಿಯಾದವರಿಗೆ ವಿದೇಶಗಳಿಂದ ದೊಡ್ಡ ಮೊತ್ತದ ಹಣ ಸಂದಾಯವಾಗಿರುವುದು ದೃಢಪಟ್ಟ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಧಾರ್ಮಿಕ ಮತಾಂತರ ದಂಧೆಯ ಮಾಸ್ಟರ್ ಮೈಂಡ್ ಜಮಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾ ಅವರ ಮೇಲೆ ಸಮಾಜದ ದುರ್ಬಲ ವರ್ಗದವರು ಮತ್ತು ಬಡವರನ್ನು ಮತಾಂತರ ಮಾಡುವುದಕ್ಕಾಗಿ ವಿದೇಶಗಳಿಂದ ₹100 ಕೋಟಿ ಹಣ ಪಡೆದಿರುವ ಆರೋಪವಿದ್ದು, ಆತನ ಅಕ್ರಮ ವಹಿವಾಟು ಮತ್ತು ವಿದೇಶಿ ನಿಧಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಧಾರ್ಮಿಕ ಮತಾಂತರ ದಂಧೆಯಲ್ಲಿ ಭಾಗಿಯಾದ ಆರೋಪದಡಿ ಚಂಗೂರ್ ಬಾಬಾನನ್ನು ಈಚೆಗೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿತ್ತು. ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಇ.ಡಿ ಶೀಘ್ರದಲ್ಲೇ ಚಂಗೂರ್ ಬಾಬಾ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ಮಾತನಾಡಿ, 'ಧಾರ್ಮಿಕ ಮತಾಂತರದ ಮಾಸ್ಟರ್ ಮೈಂಡ್ ಜಲಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾ ನೇತೃತ್ವದ ತಂಡದ ಚಟುವಟಿಕೆಗಳು ಸಮಾಜ ವಿರೋಧಿ ಮಾತ್ರವಲ್ಲದೆ, ರಾಷ್ಟ್ರ ವಿರೋಧಿಯಾಗಿವೆ. ಕೂಡಲೇ ಈ ತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಚಂಗೂರ್ ಬಾಬಾ ನೇತೃತ್ವದ ತಂಡದಲ್ಲಿ 18 ಸದಸ್ಯರಿದ್ದು, ಅವರಲ್ಲಿ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ತಂಡ ಸಕ್ರಿಯವಾಗಿದೆ. ಬಡವರಿಗೆ ಹಣ ನೀಡುವ ಮೂಲಕ ಈ ತಂಡ ಜನರನ್ನು ಆಕರ್ಷಿಸುತ್ತಿತ್ತು. ವಿವಿಧ ಜಾತಿಗಳ ಜನರನ್ನು ಮತಾಂತರಿಸಲು ದರ ನಿಗದಿಪಡಿಸಿತ್ತು ಎಂದು ಎಟಿಎಸ್ ತಿಳಿಸಿದೆ.
ಕೆಲವು ತಿಂಗಳ ಹಿಂದೆ ಬಲರಾಂಪುರದ ಉತ್ರೌಲಾದಲ್ಲಿರುವ ಚಂಗೂರ್ ಬಾಬಾ ಅವರ ಐಷಾರಾಮಿ ಮನೆಯನ್ನು ಕೆಡವಲು ಜಿಲ್ಲಾಡಳಿತ ಬುಲ್ಡೋಜರ್‌ಗಳನ್ನು ಬಳಸಿತ್ತು.




