HEALTH TIPS

GST Notice: ವ್ಯಾಪಾರಿಗಳು UPI ಬಿಟ್ಟು ಕ್ಯಾಶ್‌ ಪಡೆದರೆ ಜಿಎಸ್‌ಟಿಯಿಂದ ಪಾರಾಗಬಹುದಾ?; ಆದಾಯ ತೆರಿಗೆ ಇಲಾಖೆ ಹೇಳೋದೇನು?

ಡಿಜಿಟಲ್‌ ಹಣ ಪಾವತಿ (Digital Payment) ಕ್ರಮದಿಂದಾಗಿ ವ್ಯಾಪಾರ ಸುಲಭವಾಗಿತ್ತು. ಚೇಂಜ್‌ ಕೇಳುವ..ಕೊಡುವ ರಗಳೆ ಇಲ್ಲದೆ ಕೊಡು-ಕೊಳ್ಳುವಿಕೆ ಮುಗಿಯುತ್ತಿತ್ತು. ಹೂವು, ಹಣ್ಣು-ತರಕಾರಿ, ಹಾಲು, ಕಾಳು-ಕಡಿಯಂಥ ದಿನಬಳಕೆಯ ವಸ್ತುಗಳ ಮಾರಾಟಗಾರರಿಂದ ಹಿಡಿದು ದೊಡ್ಡದೊಡ್ಡ ಐಷಾರಾಮಿ ವಸ್ತುಗಳನ್ನ ಮಾರುವರವರೆಗೆ ಎಲ್ಲರ ಬಳಿಯೂ UPI ಸ್ಕ್ಯಾನರ್‌ ಇದ್ದೇ ಇದೆ.

ಆದರೆ ಈಗ ಅಂಗಡಿಗಳ ಮಾಲೀಕರು, ಸಣ್ಣಸಣ್ಣ ವ್ಯಾಪಾರಿಗಳಗೆ UPI ದೊಡ್ಡ ತಲೆಬಿಸಿಯಾಗಿ ಮಾರ್ಪಟ್ಟಿದೆ. ಬೆಂಗಳೂರಲ್ಲಿ ಅನೇಕ ವ್ಯಾಪಾರಿಗಳು ʼನೋ ಯುಪಿಐ, ಓನ್ಲಿ ಕ್ಯಾಶ್‌ʼ ಎನ್ನುತ್ತಿದ್ದಾರೆ. ನಮಗೆ ಯುಪಿಐನಲ್ಲಿ ಪಾವತಿ ಮಾಡ್ಲೇಬೇಡಿ. ನಗದನ್ನೇ ಕೊಡಿ ಎಂದು ಹೇಳುತ್ತಿದ್ದಾರೆ. ಒಂದಷ್ಟು ಜನರಂತೂ ಯುಪಿಐ ಕ್ಯೂಆರ್‌ ಕೋಡ್‌ ಸ್ಟಿಕ್ಕರ್‌ಗಳನ್ನೇ ತೆಗೆದುಬಿಟ್ಟಿದ್ದಾರೆ. ಹಲವು ಶಾಪ್‌ಗಳ ಎದುರು ʼONLY CASHʼ ಎನ್ನುವ ಬೋರ್ಡ್‌ಗಳು ಮತ್ತೆ ರಾರಾಜಿಸುತ್ತಿವೆ..

ಇದಕ್ಕೆಲ್ಲ ಕಾರಣ ಜಿಎಸ್‌ಟಿ ನೋಟಿಸ್‌. ಸಣ್ಣಪುಟ್ಟ ಅಂಗಡಿ ನಡೆಸುವವರು, ರಸ್ತೆಬದಿ ವ್ಯಾಪಾರಿಗಳು ಸೇರಿ ಅನೇಕ ವ್ಯಾಪಾರಿಗಳಿಗೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ನೋಟಿಸ್‌ ಕೊಟ್ಟಿದ್ದೇ ಈ ಬದಲಾವಣೆಗೆ ಕಾರಣ. ಯುಪಿಐ ವಹಿವಾಟು ನಡೆಸುತ್ತಿರುವ ಅನೇಕ ವ್ಯಾಪಾರಿಗಳಿಗೆ ತೆರಿಗೆ ಕಟ್ಟುವಂತೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ನೀಡಿದೆ. ಕೆಲವರಿಗಂತೂ ಕಟ್ಟಬೇಕಾದ ತೆರಿಗೆಯ ಮೊತ್ತ ಲಕ್ಷಲಕ್ಷ ರೂಪಾಯಿಗಳಷ್ಟು ಬಂದಿದೆ. ಇದರಿಂದ ಕಂಗೆಟ್ಟಿರುವ ವ್ಯಾಪಾರಿಗಳೆಲ್ಲ ನಮಗೆ ಯುಪಿಐ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ತೆರಿಗೆ ಅಧಿಕಾರಿಗಳು ತಮ್ಮನ್ನ ಹಿಂಸಿಸಬಹುದು, ತಮಗೆ ತೊಡಕು ಉಂಟಾಗಬಹುದು ಎಂಬ ಆತಂಕದಲ್ಲಿ ಆನ್‌ಲೈನ್‌ ಹಣ ಪಾವತಿಯೇ ಬೇಡ ಎನ್ನುತ್ತಿದ್ದಾರೆ. ಹೀಗೆ..ಸುತ್ತಲಿನ ಅಂಗಡಿಗಳವರೆಲ್ಲ ಓನ್ಲಿ ಕ್ಯಾಶ್‌ ಎನ್ನುತ್ತಿರುವ ಕಾರಣ ಗ್ರಾಹಕರಿಗೂ ತೊಂದರೆಯಾಗಿದೆ.

ಜಿಎಸ್‌ಟಿ ನಿಯಮವೇನು?

ಸದ್ಯ ಇರುವ ಜಿಎಸ್‌ಟಿ ನಿಯಮದ ಪ್ರಕಾರ, ಯಾವುದೇ ಸರಕುಗಳನ್ನ ಪೂರೈಕೆ ಮಾಡುವವರು ತಮ್ಮ ವಹಿವಾಟು ವಾರ್ಷಿಕವಾಗಿ 40 ಲಕ್ಷ ರೂ.ಮೀರಿದ್ದರೆ ಅವರು ಜಿಎಸ್‌ಟಿಗೆ ನೋಂದಣಿ ಮಾಡಿಕೊಳ್ಳಬೇಕು ಮತ್ತು ಅದರಡಿಯಲ್ಲಿ ತೆರಿಗೆ ಪಾವತಿಸಬೇಕು. ಹಾಗೇ, ಸೇವಾವಲಯದಲ್ಲಿರುವವರು ತಮ್ಮ ವಾರ್ಷಿಕ ವಹಿವಾಟು 20 ಲಕ್ಷ ರೂಪಾಯಿ ಮೀರಿದ್ದರೆ ಜಿಎಸ್‌ಟಿಯಡಿ ರಿಜಿಸ್ಟರ್‌ ಮಾಡಿಕೊಂಡು, ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇದೇ ನಿಯಮದ ಅನ್ವಯ ತಾವು ನೋಟಿಸ್‌ ನೀಡಿದ್ದಾಗಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಹೇಳಿಕೊಂಡಿದೆ.

2021-22ರ ನಂತರದಲ್ಲಿ ನಡೆದ ಯುಪಿಐ ವಹಿವಾಟುಗಳ ದತ್ತಾಂಶವು ಜಿಎಸ್‌ಟಿ ನಿಗದಿತ ಮಿತಿಯನ್ನ ಮೀರಿದವರಿಗೆ ಮಾತ್ರ ನೋಟಿಸ್‌ ನೀಡಲಾಗಿದೆ ಎಂದೂ ಹೇಳಿರುವ ವಾಣಿಜ್ಯ ತೆರಿಗೆ ಇಲಾಖೆ, ಯಾವೆಲ್ಲ ಸೇವೆ ಮತ್ತು ಸರಕು ಪೂರೈಕೆದಾರರ ವಾರ್ಷಿಕ ವಹಿವಾಟು ಮಿತಿಯನ್ನ ಮೀರಿದೆಯೋ ಅವರೆಲ್ಲರೂ ಜಿಎಸ್‌ಟಿ ಅಡಿ ನೋಂದಾಯಿಸಿಕೊಳ್ಳಲೇಬೇಕು.ತಮ್ಮ ವಹಿವಾಟನ್ನ ತಿಳಿಸಿ, ಅದಕ್ಕೆ ಅನ್ವಯವಾಗುವಷ್ಟು ಮೊತ್ತದ ಹಣವನ್ನ ತೆರಿಗೆಯಾಗಿ ಪಾವತಿಸಬೇಕು ಎಂದು ತಿಳಿಸಿದೆ.

ಟ್ಯಾಕ್ಸ್‌ ಡಿಪಾರ್ಟ್‌ಮೆಂಟ್‌ನ ಸ್ಪಷ್ಟನೆ ಏನು?

ಜಿಎಸ್‌ಟಿ ನೋಟಿಸ್‌ನಿಂದಾಗಿ ಸಣ್ಣಸಣ್ಣ ವ್ಯಾಪಾರಿಗಳೆಲ್ಲ ಭಯಭೀತರಾಗಿದ್ದಾರೆ. ಈ ನೋಟಿಸ್‌ ಬಗ್ಗೆ ತೆರಿಗೆ ಇಲಾಖೆ ಸ್ಪಷ್ಟನೆ ನೀಡದೆ. ಜಿಎಸ್‌ಟಿ ನೋಟಿಸ್‌ಗಳನ್ನು ಕೇವಲ ಯುಪಿಐ ವಹಿವಾಟುಗಳ ಆಧಾರದ ಮೇಲೆ ನೀಡಲಾಗುವುದಿಲ್ಲ ಬದಲಾಗಿ ಪಾಯಿಂಟ್-ಆಫ್-ಸೇಲ್ ಯಂತ್ರಗಳು, ಬ್ಯಾಂಕ್ ವರ್ಗಾವಣೆಗಳು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ನಗದು ಸೇರಿದಂತೆ ಎಲ್ಲಾ ರೀತಿಯ ಪಾವತಿಗಳನ್ನು ಪರಿಗಣಿಸುತ್ತಾರೆ ಎಂದು ತಿಳಿಸಿದೆ. ಅಷ್ಟೇ ಅಲ್ಲ, ವ್ಯಾಪಾರಿಗಳು ಯುಪಿಐ ಮೂಲಕ ವಹಿವಾಟು ನಡೆಸೋದನ್ನ ಬಿಟ್ಟ ತಕ್ಷಣ ಅವರು ಜಿಎಸ್‌ಟಿಯಡಿ ತೆರಿಗೆ ಕಟ್ಟೋದನ್ನ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದೂ ಒತ್ತಿ ಹೇಳಿದೆ.

ಪೂರೈಕೆದಾರರು ತಾವು ಪೂರೈಸಿದ ಸರಕುಗಳಿಗೆ ಯಾವುದೇ ರೂಪದಲ್ಲಿ ಹಣ ಪಡೆದರೂ ಅಥವಾ ಗ್ರಾಹಕರೊಂದಿಗೆ ಯಾವುದೇ ವಿಧದಲ್ಲಿ ವಹಿವಾಟು ನಡೆಸಿದರೂ ಅದು ಜಿಎಸ್‌ಟಿಗೆ ಅನ್ವಯ ಆಗುತ್ತದೆ. ಯುಪಿಐ ಅನ್ನೋದು ಹಣ ಸ್ವೀಕರಿಸಲು-ಪಾವತಿಸಲು ಇರುವ ಒಂದು ವಿಧಾನ ಅಷ್ಟೇ. UPIನಿಂದ ಮಾತ್ರ ಜಿಎಸ್‌ಟಿ ಲೆಕ್ಕಾಚಾರ ಆಗೋದಿಲ್ಲ. ಜಿಎಸ್‌ಟಿ ಕಾಯ್ದೆಯಡಿ ಅನ್ವಯ ಆಗುವ ತೆರಿಗೆಯನ್ನ ಸಂಗ್ರಹಿಸಲು ನಮ್ಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದೂ ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries