ಕೋಲ್ಕತ್ತ: ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಕಾಲೇಜಿನ ಬಾಲಕರ ಹಾಸ್ಟೆಲ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಹರಿದೇವಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಕೌನ್ಸೆಲಿಂಗ್‌ಗಾಗಿ ಬಾಲಕರ ಹಾಸ್ಟೆಲ್‌ಗೆ ಬರುವಂತೆ ಹೇಳಲಾಗಿತ್ತು. ಈ ವೇಳೆ ಆರೋಪಿ, ಪಾನೀಯದಲ್ಲಿ ಮತ್ತು ಬರುವ ವಸ್ತು ಸೇರಿಸಿ ನನಗೆ ಕುಡಿಸಿದ್ದಾನೆ. ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ ಎಂದೂ ಆಕೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕೋಲ್ಕತ್ತದ ಕಾನೂನು ಕಾಲೇಜಿನ ವಿದ್ಯಾರ್ಥಿನಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಸುಮಾರು ಹದಿನೈದು ದಿನಗಳ ನಂತರ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.




