HEALTH TIPS

IIT Bombay: ವಿದ್ಯಾರ್ಥಿ ಸೋಗಿನಲ್ಲಿ 14 ದಿನ ಉಳಿದಿದ್ದ ಮಂಗಳೂರು ಯುವಕ Bilal Ahmad Teli; 21 ಇಮೇಲ್ ಐಡಿ ಸೃಷ್ಟಿ!

ಮುಂಬೈ: ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಭಾರಿ ಭದ್ರತಾ ಲೋಪವಾಗಿದ್ದು ಕರ್ನಾಟಕದ ಮಂಗಳೂರು ಮೂಲದ ಯುವಕನೋರ್ವ ಶಿಕ್ಷಣ ಸಂಸ್ಥೆಯಲ್ಲಿ ಬರೊಬ್ಬರಿ 14 ದಿನಗಳ ಕಾಲ ತಂಗಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಹೌದು.. ವಿದ್ಯಾರ್ಥಿ ಸೋಗಿನಲ್ಲಿ ಐಐಟಿ ಬಾಂಬೆ ಕ್ಯಾಂಪಸ್‌ಗೆ (IIT Bombay Campus) ಅಕ್ರಮ ಪ್ರವೇಶ ಮಾಡಿದ್ದ ಮಂಗಳೂರು ಯುವಕನನ್ನು ಮುಂಬೈ ಪೊಲೀಸರು (Mumbai Police) ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಮಂಗಳೂರು ಮೂಲದ ಬಿಲಾಲ್ ಅಹ್ಮದ್ ತೇಲಿ ಎಂದು ಗುರುತಿಸಲಾಗಿದೆ.

ಜೂನ್‌ 17ರಂದು ಕಾಲೇಜು ಕ್ಯಾಂಪಸ್‌ನ ಭದ್ರತಾ ಸಿಬ್ಬಂದಿ ಆತನನ್ನ ಹಿಡಿದು ಪೊವೈ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ದೂರು ನೀಡಿದೆ.

ಪೊಲೀಸರ ಪ್ರಕಾರ, ಬಿಲಾಲ್‌ ಶಿಕ್ಷಣ ಸಂಸ್ಥೆಯ (Educational institution) ಪ್ರಮುಖ ಕಾರ್ಯಕ್ರಮವೊಂದಕ್ಕೆ ಬಂದಿದ್ದ, ಆದರೆ ವಾಪಸ್‌ ಹೋಗಿರಲಿಲ್ಲ. ಮೊದಲು ಒಂದು ದಿನದ ಅಧ್ಯಯನಕ್ಕೆ ಕ್ಯಾಂಪಸ್‌ ಪ್ರವೇಶಿಸಿದವನು ಬಳಿಕ ಕ್ಯಾಂಪಸ್‌ನಲ್ಲಿಯೇ ಉಳಿದುಕೊಂಡು, ಉಪನ್ಯಾಸಗಳಿಗೆ ಹಾಜರಾಗಲು ಶುರು ಮಾಡಿದ್ದ. ಯಾವುದೇ ಮಾನ್ಯತಾ ದಾಖಲೆಗಳನ್ನು ಹೊಂದಿರದ ಬಿಲಾಲ್‌ ತರಗತಿಗಳಿಗೆ ಹಾಜರಾಗುತ್ತಿದ್ದ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, 'ನಕಲಿ ವಿದ್ಯಾರ್ಥಿ' ಹಾಸ್ಟೆಲ್ ಕೊಠಡಿಗಳಲ್ಲಿ ಸೋಫಾದ ಮೇಲೆ ಮಲಗುತ್ತಿದ್ದ, ಕಾಲೇಜಿನಲ್ಲಿ ಉಪನ್ಯಾಸಗಳಿಗೆ ಹಾಜರಾಗುತ್ತಿದ್ದ ಮತ್ತು ಉಚಿತ ಕಾಫಿ ಲಭ್ಯವಿರುವ ಸ್ಥಳಗಳಿಗೆ ಭೇಟಿ ನೀಡಿ ಕಾಫಿ ಸೇವಿಸುತ್ತಿದ್ದ. ತನ್ನನ್ನು ತಾನು ಪಿಎಚ್‌ಡಿ ವಿದ್ಯಾರ್ಥಿ ಎಂದು ಪರಿಚಯಿಸಿಕೊಂಡು ನಕಲಿ ಪ್ರವೇಶ ದಾಖಲೆಗಳನ್ನು ಬಳಸುತ್ತಿದ್ದ ಎಂದು ತಿಳಿಸಿದ್ದಾರೆ.

ಬಯಲಾಗಿದ್ದೇ ರೋಚಕ

ಒಮ್ಮೆ ತರಗತಿಯಲ್ಲಿದ್ದಾಗ ಪ್ರಾಧ್ಯಾಪಕರೊಬ್ಬರು ತನ್ನ ಗುರುತಿನ ಚೀಟಿ ತೋರಿಸುವಂತೆ ಕೇಳಿದ್ದರು. ಜೂನ್ 4 ರಂದು CREST ವಿಭಾಗದ ಅಧಿಕಾರಿ ಶಿಲ್ಪಾ ಕೋಟಿಕ್ಕಲ್ ಅವರು ಅನುಮಾನಾಸ್ಪದ ಯುವಕನೊಬ್ಬ ತಮ್ಮ ಕಚೇರಿಗೆ ಪ್ರವೇಶಿಸುವುದನ್ನು ಕಂಡರು.

ಕೂಡಲೇ ಹೋಗಿ ಪ್ರಶ್ನಿಸಿದಾಗ ಮತ್ತು ಆತನ ಗುರುತಿನ ಚೀಟಿ ಕೇಳಿದಾಗ, ಅಲ್ಲಿಂದ ಪರಾರಿಯಾಗಿದ್ದ. ಆಗ ಅಕ್ರಮ ಪ್ರವೇಶ ಮಾಡಿರುವುದು, ಕ್ಯಾಂಪಸ್‌ನಲ್ಲೇ ಅಕ್ರಮವಾಗಿ ವಾಸ್ತವ್ಯ ಹೂಡಿರುವುದು ಬೆಳಕಿಗೆ ಬಂದಿತು. ನಂತರ ಆಡಳಿತ ಮಂಡಳಿ ಆತನನ್ನ ಪೊಲೀಸರಿಗೆ ಒಪ್ಪಿಸಿ, ದೂರು ದಾಖಲಿಸಿತು.

ನಂತರ ಸಿಸಿಟಿವಿ ಮೂಲಕ ಶಂಕಿತ ಮುಖವನ್ನು ಗುರುತಿಸಿ ಐಐಟಿಯ ಭದ್ರತಾ ತಂಡ ಕೂಡಲೇ ಪ್ರಿಂಟ್ ಔಟ್ ಹಿಡಿದು ಕ್ಯಾಂಪಸ್ ಪೂರ್ತಿ ಹುಡುಕಾಡಿತ್ತು. ಜೂನ್ 17ರಂದು ಸಂಜೆ 4 ಗಂಟೆ ಸುಮಾರಿಗೆ ಕೋಟಿಕ್ಕಲ್ ಮತ್ತೆ ಆ ಯುವಕನನ್ನು ನೋಡಿದ್ದಾರೆ.

ಭದ್ರತಾ ಸಿಬ್ಬಂದಿಗಳಾದ ಕಿಶೋರ್ ಕುಂಭಾರ್ ಮತ್ತು ಶ್ಯಾಮ್ ಘೋಡ್ವಿಂದೆ ಕೂಡಲೇ ಆತನನ್ನು ಬಂಧಿಸಿದ್ದಾರೆ. ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಸುಮಾರು 13,000 ವಿದ್ಯಾರ್ಥಿಗಳು (ಯುಜಿ, ಪಿಜಿ ಮತ್ತು ಪಿಎಚ್‌ಡಿ) ವಾಸಿಸುತ್ತಿದ್ದಾರೆ.

ಪೊಲೀಸರಿಂದ ತನಿಖೆ

ಭದ್ರತೆಯನ್ನು ತಪ್ಪಿಸಿ ಕ್ಯಾಂಪಸ್‌ಗೆ ಹೇಗೆ ಪ್ರವೇಶಿಸಿದ್ದ ಮತ್ತು ರಾತ್ರಿ ಎಲ್ಲಿ ಕಳೆದಿದ್ದ ಎಂಬುದರ ಕುರಿತು ಈಗ ತನಿಖೆ ನಡೆಸಲಾಗುತ್ತಿದೆ. ಈ ಯುವಕ ಯಾವುದೋ ದೊಡ್ಡ ಪಿತೂರಿ ಮಾಡಲು ಇಲ್ಲಿಗೆ ಬಂದಿರುವ ಅನುಮಾನವಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐಐಟಿ ಬಾಂಬೆಯ ಭದ್ರತೆ ಮತ್ತು ಜಾಗೃತ ಇಲಾಖೆ ಸಲ್ಲಿಸಿದ ಎಫ್‌ಐಆರ್ ಪ್ರಕಾರ, ರಾಹುಲ್ ದತ್ತಾರಾಮ್ ಪಾಟೀಲ್ ಸಂಸ್ಥೆಯ ಉದ್ಯೋಗಿಯಾಗಿದ್ದು ಅವರೇ ದೂರು ದಾಖಲಿಸಿದ್ದಾರೆ. ಗುಪ್ತಚರ ಬ್ಯೂರೋ ಮತ್ತು ಭಯೋತ್ಪಾದನಾ ನಿಗ್ರಹ ಸಂಸ್ಥೆಗಳು ಸಹ ಬಿಲಾಲ್ ಅವರನ್ನು ಪ್ರಶ್ನಿಸುತ್ತಿವೆ. ಈ ಪ್ರಕರಣದಲ್ಲಿ ರಾಷ್ಟ್ರ ವಿರೋಧಿ ಅಂಶದ ಕೋನವನ್ನು ಸಹ ಅವರು ತನಿಖೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊವೈ ಪೊಲೀಸರು ಆರೋಪಿಯನ್ನು ಐಐಟಿ ಪೊವೈ ಕ್ಯಾಂಪಸ್‌ನಿಂದ ಬಂಧಿಸಿದ್ದಾರೆ. ಹೊರಗಿನವರು ಎರಡು ವಾರಗಳ ಕಾಲ ಕ್ಯಾಂಪಸ್‌ನಲ್ಲಿ ಹೇಗೆ ಉಳಿಯಬಹುದು ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 329(3) ಮತ್ತು 329(4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಪೊಲೀಸ್ ವಶದಲ್ಲಿದ್ದಾನೆ. ಬಿಲಾಲ್ ಬಂದ ಹಿಂದಿನ ಉದ್ದೇಶವೇನು, ಆತ ಯಾರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

21 ಇ-ಮೇಲ್ ಐಡಿಗಳ ತೆರೆದಿದ್ದ..

ಇನ್ನು ಬಿಲಾಲ್ 21 ಇಮೇಲ್ ಐಡಿಗಳನ್ನು ರಚಿಸಿದ್ದಾನೆ ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, ತಾನು ನಡೆಸುತ್ತಿರುವ ಹಲವಾರು ಬ್ಲಾಗ್‌ಗಳಿಗಾಗಿ ಅವುಗಳನ್ನು ಮಾಡಿರುವುದಾಗಿ ಹೇಳಿದ್ದಾನೆ. ಅವರ ಪ್ರಕಾರ, ಹೆಚ್ಚಿನ ಹಣವನ್ನು ಗಳಿಸಲು ಸಾಮಾಜಿಕ ಮಾಧ್ಯಮದ ಪ್ರಭಾವಿಯಾಗಲು ಬಯಸಿದ್ದಾಗಿ ಆತ ಹೇಳಿದ್ದಾನೆ ಎಂದು ಹೇಳಿದ್ದಾರೆ.

ಯಾರು ಈ ಬಿಲಾಲ್?

ಬಿಲಾಲ್ ಅಹ್ಮದ್ ಮೂಲತಃ ಮಂಗಳೂರು ಮೂಲದವನು ಎಂದು ತಿಳಿದುಬಂದಿದೆ. ಅಲ್ಲದೆ ಬಿಲಾಲ್ ಪ್ರಸ್ತುತ ಗುಜರಾತ್‌ನ ಸೂರತ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಅಲ್ಲಿ ಅವರ ಮಾಸಿಕ 1.25 ಲಕ್ಷ ರೂ ವೇತನ ಪಡೆಯುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಟಿ ಕ್ಷೇತ್ರದಲ್ಲಿ ತೀವ್ರ ಆಸಕ್ತಿ ಹೊಂದಿರುವ ಈತ 12 ನೇ ತರಗತಿ ಮುಗಿಸಿದ ನಂತರ ಸಾಫ್ಟ್‌ವೇರ್ ವಿಭಾಗದಲ್ಲಿ ಆರು ತಿಂಗಳ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾನೆ. ವೆಬ್ ವಿನ್ಯಾಸದಲ್ಲಿ ಒಂದು ವರ್ಷದ ಡಿಪ್ಲೊಮಾ ಕೂಡ ಮಾಡಿದ್ದಾನೆ. ಬಿಲಾಲ್ ಅವರ ತಂದೆಗೆ ಗಾರ್ಮೆಂಟ್ ವ್ಯವಹಾರವಿದೆ ಎಂದು ವರದಿಯಾಗಿದೆ. 2024 ರಲ್ಲಿ, ಬಿಲಾಲ್ ಬಹ್ರೇನ್‌ಗೆ ಪ್ರಯಾಣ ಬೆಳೆಸಿದ್ದ, ಅದಕ್ಕೂ ಮೊದಲು, ಆತ ದುಬೈಗೆ ಪ್ರಯಾಣದ ಇತಿಹಾಸ ಸಹ ಹೊಂದಿದ್ದ ಎಂದು ಹೇಳಲಾಗಿದೆ.

ಆರೋಪಿ ಹೇಳಿದ್ದೇನು?

ತನಿಖೆ ವೇಳೆ ಬಿಲಾಲ್, 'ಬಿಲಾಲ್ ತೇಲಿ ಜೂನ್ 2 ರಿಂದ ಜೂನ್ 7 ರವರೆಗೆ ಮತ್ತು ಜೂನ್ 10 ರಿಂದ ಜೂನ್ 17 ರವರೆಗೆ ಹಲವು ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries