ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ವಿರುದ್ಧ ನಡೆಸಿದ ಸೇನಾ ಕಾರ್ಯಾಚರಣೆಯ ಯಶಸ್ಸನ್ನು ಸಂಭ್ರಮಿಸಿದ್ದಾರೆ. ಅಲ್ಲದೇ, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಟ್ರಂಪ್ ಅವರ ಹೆಸರನ್ನು ನಾಮನಿರ್ದೇಶನ ಮಾಡುವುದಾಗಿ ನೆತನ್ಯಾಹು ಸೋಮವಾರ ಹೇಳಿದ್ದಾರೆ.
ಟ್ರಂಪ್ ಅವರೊಂದಿಗಿನ ಔತಣಕೂಟದ ವೇಳೆ ನೆತನ್ಯಾಹು ಈ ಕುರಿತು ಮಾಹಿತಿ ನೀಡಿದ್ದಾರೆ. 'ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಗೆ ಕಳುಹಿಸಿದ ಪತ್ರವನ್ನು ನಾನು ನಿಮ್ಮ ಮುಂದಿಡಲು ಬಯಸುತ್ತೇನೆ. ನಾನು ನಿಮ್ಮನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತಿದ್ದೇನೆ. ನೀವು ಅದಕ್ಕೆ ಅರ್ಹರಾಗಿದ್ದೀರಿ. ಆ ಗೌರವವನ್ನು ನೀವು ಪಡೆಯಬೇಕು' ಎಂದು ನೆತನ್ಯಾಹು ಹೇಳಿದ್ದಾರೆ.
'ಅವರು ಒಂದರ ನಂತರ ಒಂದರಂತೆ ಶಾಂತಿ ಸ್ಥಾಪಿಸುತ್ತಿದ್ದಾರೆ' ಎಂದು ಟ್ರಂಪ್ ಕುರಿತು ನೆತನ್ಯಾಹು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಇಸ್ರೇಲ್ ಹಾಗೂ ಇರಾನ್ ನಡುವಣ ಕದನ ವಿರಾಮಕ್ಕೆ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು ಎನ್ನಲಾಗಿದೆ.
ಪಾಕಿಸ್ತಾನ ಸಹ ಈಗಾಗಲೇ ಟ್ರಂಪ್ ಅವರನ್ನು ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು ಎಂದು ವರದಿಯಾಗಿತ್ತು.

