HEALTH TIPS

Operation Baam : ಬಲೂಚಿಸ್ತಾನ ಹೋರಾಟಕ್ಕೆ ಹೊಸ ಮುನ್ನುಡಿ - ಅಕ್ಷರಶಃ ಪಾಕಿಸ್ತಾನದ ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್

ಇಸ್ಲಾಮಾಬಾದ್ : ಬಲೂಚಿಸ್ತಾನ ಲಿಬರೇಶನ್ ಫ್ರಂಟ್ (BLF) ಹೋರಾಟಕ್ಕೆ ಹಲವು ದಶಕಗಳ ಇತಿಹಾಸವಿದೆ, ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಪಾಕಿಸ್ತಾನದ ಸರ್ಕಾರ ತಲೆಕೆಡಿಸಿಕೊಳ್ಳದೇ ಇದ್ದಾಗ, ಹೋರಾಟಗಾರರು ಹಿಂಸೆಯ ದಾರಿಯನ್ನು ಹಿಡಿದರು.

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿರುವ ಹೋರಾಟಕ್ಕೆ ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿ ಸೊಪ್ಪು ಹಾಕದೇ ಇರುವ ಹಿನ್ನಲೆಯಲ್ಲಿ, ಬಿಎಲ್‌ಎಫ್,'ಆಪರೇಷನ್ ಬಾಮ್'ಕಾರ್ಯಾಚರಣೆಯನ್ನು ಆರಂಭಿಸಿದೆ. ಹೋರಾಟಗಾರರ ನೇರ ಟಾರ್ಗೆಟ್ ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಸರ್ಕಾರಿ ಕಚೇರಿಗಳು ಮತ್ತು ಮಿಲಿಟರಿ ನೆಲೆಗಳು. ಇವರು ನಡೆಸುವ ಎಲ್ಲಾ ಹೋರಾಟಕ್ಕೆ, ಭಾರತದ ಕುಮ್ಮುಕ್ಕು ಎನ್ನುವುದು ಪಾಕಿಸ್ತಾನದ ಆರೋಪ.

ಬಲೂಚಿ ಆರ್ಮಿಗಳು ಎಷ್ಟು ಸಂಘಟಿತವಾಗಿ ದಾಳಿಯನ್ನು ನಡೆಸುತ್ತಾರೆ ಎಂದರೆ ಪಾಕಿಸ್ತಾನದ ರೈಲನ್ನೇ ಕೆಲವು ತಿಂಗಳ ಹಿಂದೆ ಹೈಜಾಕ್ ಮಾಡಿದ್ದರು. ಕ್ವೆಟ್ಟಾದಿಂದ ಪೇಶಾವರದ ಕಡೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸಪ್ರೆಸ್ ರೈಲನ್ನು ಹೈಜ್ಯಾಕ್ ಮಾಡಿದ್ದರು. ಇವರಿಂದ, ಪ್ರಯಾಣಿಕರನ್ನು ರಕ್ಷಿಸಲು ಪಾಕಿಸ್ತಾನದ ಮಿಲಿಟರಿಗೆ ಸಾಕುಸಾಕಾಗಿ ಹೋಗಿತ್ತು. ಈಗ, ಸರ್ಕಾರದ ವಿರುದ್ದ ಹೊಸ ಕಾರ್ಯಾಚರಣೆಯನ್ನು ನಡೆಸುವುದಾಗಿ ಹೇಳಿಕೊಂಡಿದೆ. ಇದರ ಮೊದಲ ಪ್ರಯೋಗವೂ ನಡೆದಿದೆ.

ಯಾಕಾಗಿ ಬಲೂಚಿ ಬಂಡುಕೋರರ ಆಪರೇಷನ್ ಬಾಮ್?

ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವೆಂದರೆ ಅದುವೇ ಬಲೂಚಿಸ್ತಾನ. ನೈಸರ್ಗಿಕವಾಗಿ ಸಂಪದ್ಬರಿತವಾಗಿರುವ ಈ ಪ್ರದೇಶವನ್ನು ಯಾವಾಗಲೂ ಪಾಕಿಸ್ತಾನ ಕಡೆಗಣಿಸಿದ್ದೇ ಹೆಚ್ಚು. ಒಂದು ಹಂತಕ್ಕೆ ಇದನ್ನು ಸಹಿಸಿಕೊಂಡು ಬಂದಿದ್ದ ಅಲ್ಲಿನ ಜನರು ಈಗ ಹಿಂಸಾತ್ಮಕವಾಗಿ ತಿರುಗಿಬಿದ್ದಿದ್ದಾರೆ. ಇವರು ನಾಗರೀಕರನ್ನು ಟಾರ್ಗೆಟ್ ಮಾಡುವುದಿಲ್ಲ, ಬದಲಿಗೆ ಸರ್ಕಾರ ಮತ್ತು ಮಿಲಿಟರಿ ಕಚೇರಿಗಳು. ಹಾಗಾಗಿಯೇ, ಇವರ ಹೋರಾಟದ ಬಿಸಿ ಪಾಕಿಸ್ತಾನಕ್ಕೆ ದಿನದಿಂದ ದಿನಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ. ಇವರ ಬೇಡಿಕೆಯನ್ನು ಈಡೇರಿಸದೇ ಮತ್ತು ಇವರ ದಾಳಿಯನ್ನು ತಪ್ಪಿಸಲಾಗದೇ, ಬಲೂಚಿಗಳ ಹಿಂದೆ ಭಾರತದ ಮಿಲಿಟರಿ ಇದೆ ಎನ್ನುವುದು ಪಾಕಿಸ್ತಾನದ ಆಪಾದನೆ.

ನೈಸರ್ಗಿಕ ಅನಿಲಗಳಿಂದ ಶ್ರೀಮಂತವಾಗಿರುವ ಈ ಪ್ರಾಂತ್ಯ

ಗಣಿಗಾರಿಕೆ ಮತ್ತು ನೈಸರ್ಗಿಕ ಅನಿಲಗಳಿಂದ ಶ್ರೀಮಂತವಾಗಿರುವ ಈ ಪ್ರಾಂತ್ಯವನ್ನು ಸರಿಯಾಗಿ ಪಾಕಿಸ್ತಾನ ಬಳಸಿಕೊಂಡಿದ್ದರೆ ಇಂತಹ ದಾರಿದ್ರ್ಯ ಆ ದೇಶಕ್ಕೆ ಬರುತ್ತಿರಲಿಲ್ಲ. ಆದರೆ, ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು, ಬಲೂಚಿಸ್ತಾನ ಭಾಗವನ್ನು ಅಭಿವೃದ್ದಿ ಮಾಡದೇ ಇರುವುದು ಇನ್ನೊಂದು ಆಯಾಮದ ಆಪಾದನೆಯಾಗಿದೆ. ಪಾಕಿಸ್ತಾನದ ಸೇನೆಯು ಭಾರೀ ಪ್ರಮಾಣದಲ್ಲಿ ಇಲ್ಲಿ ಸೈನಿಕರನ್ನು ಹಾಕಿ, ಜನರನ್ನು ಶೋಷಣೆ ಮಾಡುತ್ತಿದ್ದಾರೆ ಎನ್ನುವುದು ಈ ಭಾಗದ ಜನರ ಆರೋಪ. ಈ ಹಿನ್ನಲೆಯಲ್ಲಿ, ಹಿಂಸಾಚಾರಗಳು ನಡೆಯುತ್ತಲೆ ಇದೆ, ಈಗ ಅದನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗಲು, ಬಿಎಲ್‌ಎಫ್ ನಿರ್ಧರಿಸಿದೆ.

ಆಪರೇಷನ್ ಬಾಮ್ ದಶಕಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಹೊಸ ಅಧ್ಯಾಯ

ಆಪರೇಷನ್ ಬಾಮ್ ದಶಕಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಹೊಸ ಅಧ್ಯಾಯ ಎಂದು ಬಂಡುಕೋರರು ಹೇಳಿದ್ದಾರೆ. ಸರ್ಕಾರಿ ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಯನ್ನು ಮಾಡಲಾಗಿದೆ. ಇದರಿಂದಾಗಿ, ಈ ಭಾಗ ಪಾಕಿಸ್ತಾನದ ಇತರ ಭಾಗದಿಂದ ಸಂವಹನವನ್ನು ಕಡಿದುಕೊಂಡಿದೆ. ಪಾಕಿಸ್ತಾನ ಸರ್ಕಾರದ ಆಡಳಿತಾತ್ಮಕ ಕಟ್ಟಡಗಳಿಗೆ ಸಾಕಷ್ಟು ಹಾನಿಯಾಗಿದೆ. ಈ ಭಾಗದ ಸರ್ಕಾರಿ ಅಧಿಕಾರಿಗಳು ಕಚೇರಿಗೆ ಹೋಗಲು ಭಯಭೀತರಾಗಿದ್ದಾರೆ, ಮಿಲಿಟರಿ ಪಡೆಗಳು ಸಾವುನೋವಿನ ಭಯದಿಂದ ಇಲ್ಲಿಗೆ ಪೋಸ್ಟಿಂಗ್ ಆದರೆ, ರಿಪೋರ್ಟ್ ಮಾಡಿಕೊಳ್ಳಲು ಹಿಂಜರಿಯುತ್ತಿದ್ದಾರೆ.

ದಾಳಿ ಭಾರೀ ಪ್ರಮಾಣದಲ್ಲಿ ಮುಂದುವರಿಯಲಿದೆ ಎಂದ ಬಲೂಚಿ ಹೋರಾಟಗಾರರು

ಖರಾನ್, ಕೆಚ್ ಮತ್ತು ಪಂಜಗೂರು ಸೇರಿದಂತೆ ಕನಿಷ್ಠವೆಂದರೂ ಹದಿನೇಳು ಕಡೆ ದಾಳಿಯನ್ನು ಬಲೂಚಿ ಬಂಡುಕೋರರು ಮಾಡಿದ್ದಾರೆ. ಸಾಕಷ್ಟು ಹಾನಿಯಾಗಿದ್ದರೂ, ಪಾಕಿಸ್ತಾನಿ ಮಿಲಿಟರಿ ಅಧಿಕೃತವಾಗಿ ಮಾಹಿತಿಯನ್ನು ನೀಡಲಿಲ್ಲ. ಆದರೆ, ಸ್ಥಳೀಯರ ಪ್ರಕಾರ, ಭಾರೀ ಪ್ರಮಾಣದ ಹಾನಿಯಾಗಿದೆ. ಬಲೂಚಿಸ್ತಾನದ ಹೋರಾಟದಲ್ಲಿ ಇದೊಂದು ಹೊಸ ಅಧ್ಯಾಯ ಎಂದು ಬಂಡುಕೋರರು ಹೇಳಿಕೊಂಡಿದ್ದಾರೆ. ದೊಡ್ಡ ಪ್ರಮಾಣದ ದಾಳಿಯನ್ನು ನಡೆಸಲು ಸಮರ್ಥರಿದ್ದೇವೆ ಮತ್ತು ಸಜ್ಜಾಗಿದ್ದೇವೆ ಎಂದು ಬಲೂಚಿ ಹೋರಾಟಗಾರರು, ಪಾಕಿಸ್ತಾನ ಸರ್ಕಾರಕ್ಕೆ ನೇರ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಪಾಕಿಸ್ತಾನದ ಹಿಡಿತದಿಂದ ಕೈತಪ್ಪುತ್ತಿದೆ ಬಲೂಚಿಸ್ತಾನದ ಹೋರಾಟ

ಬಲೂಚಿ ಪಡೆಗಳ ಈ ದಾಳಿಯು, ಪಾಕಿಸ್ತಾನದ ಆಂತರಿಕ ಭದ್ರತೆಗೆ ಭಾರೀ ಸವಾಲನ್ನೊಡ್ಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕವಾಗಿ, ಔದ್ಯೋಗಿಕವಾಗಿ ಇದು ಭಾರೀ ಹಿನ್ನಡೆಗೆ ಕಾರಣವಾಗಿದೆ. ಸ್ಥಳೀಯ ನಾಯಕರೊಂದಿಗೆ ಮಾತುಕತೆಯ ಮೂಲಕ, ಪಾಕಿಸ್ತಾನ ಶಾಂತಿ ಮಂತ್ರವನ್ನು ಪಠಿಸಲು ಮುಂದಾಗಿದ್ದರೂ, ಮೊದಲು ನಮ್ಮ ಬೇಡಿಕೆ ಈಡೇರಿಸಿ, ನಂತರ ಕದನ ವಿರಾಮ ಎಂದು ಬಲೂಚಿ ಪಡೆಗಳು ಹಠ ಹಿಡಿದು ಕೂತಿವೆ. ದಿನದಿಂದ ದಿನಕ್ಕೆ ಅಲ್ಲಿನ ಪರಿಸ್ಥಿತಿ ಇಸ್ಲಾಮಾಬಾದಿನ ಹಿಡಿತದಿಂದ ಕೈತಪ್ಪುತ್ತಿದೆ. ಹೀಗಾಗಿಯೇ, ಭಾರತದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಅಲ್ಲಿನ ರಾಜಕಾರಣಿಗಳು ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು ಜೊತೆಗೆ ಹಾಸ್ಯಾಸ್ಪದ ಎಂದು ಭಾರತ ವ್ಯಂಗ್ಯವಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries