HEALTH TIPS

Parliament Monsoon Session: ಸರ್ಕಾರದ ವಿರುದ್ಧ 'ಇಂಡಿಯಾ' ಮೈತ್ರಿ ರಣತಂತ್ರ

ನವದೆಹಲಿ: ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ತಿನ ಮಳೆಗಾಲ ಅಧಿವೇಶನದಲ್ಲಿ ಒಗ್ಗಟ್ಟಿನಿಂದ ಧ್ವನಿ ಎತ್ತಿ ಕೇಂದ್ರ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಶನಿವಾರ ಸಭೆ ನಡೆಸಿ ಕಾರ್ಯತಂತ್ರ ರೂಪಿಸಿದವು. 

ವರ್ಚುವಲ್‌ ರೂಪದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಆರ್‌ಜೆಡಿ, ಎಸ್‌ಪಿ, ಎನ್‌ಸಿಪಿ-ಎಸ್‌ಪಿ, ಶಿವಸೇನಾ (ಯುಬಿಟಿ), ಜೆಎಂಎಂ, ಸಿಪಿಎಂ, ಸಿಪಿಐ, ಸಿಪಿಐ-ಎಂಎಲ್, ಫಾರ್ವರ್ಡ್ ಬ್ಲಾಕ್, ಐಯುಎಂಎಲ್ ಮತ್ತು ಕೇರಳ ಕಾಂಗ್ರೆಸ್ ಸೇರಿದಂತೆ ಇಪ್ಪತ್ತನಾಲ್ಕು ರಾಜಕೀಯ ಪಕ್ಷಗಳು ಭಾಗವಹಿಸಿದ್ದವು.

ಇಂಡಿಯಾ ಮೈತ್ರಿಕೂಟದಲ್ಲಿ ಆಮ್‌ ಆದ್ಮಿ ಪಕ್ಷವು (ಎಎಪಿ) ಪಾಲುದಾರ ಅಲ್ಲ ಎಂದು ಪಕ್ಷದ ನಾಯಕರು ಈ ಹಿಂದೆಯೇ ಪ್ರಕಟಿಸಿದ್ದಾರೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ, ಪಹಲ್ಗಾಮ್ ದಾಳಿ ಮತ್ತು ಸಿಂಧೂರ ಕಾರ್ಯಾಚರಣೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ನಾಯಕರು ಚರ್ಚಿಸಿದರು. ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಹಿನ್ನಡೆಯಾದ ಬಳಿಕ ಈ ಪಕ್ಷಗಳ ಉನ್ನತ ನಾಯಕರು ಒಟ್ಟುಸೇರಿ ರಣತಂತ್ರ ರೂಪಿಸಿದ್ದು ಇದೇ ಮೊದಲು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕಾಂಗ್ರೆಸ್‌ ನಾಯಕ ಪ್ರಮೋದ್‌ ತಿವಾರಿ, 'ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದು ನಾವು ಬಯಸುತ್ತೇವೆ. ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕೆಂದು ನಮ್ಮ ಅಪೇಕ್ಷೆ' ಎಂದರು.

'ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಹಾಜರಿರಬೇಕು. ವಿರೋಧ ಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು' ಎಂದು ಅವರು ಆಗ್ರಹಿಸಿದರು.

'ಪಹಲ್ಗಾಮ್ ದಾಳಿ, ಕದನ ವಿರಾಮ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿಕೆ, ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಎಂಟು ಪ್ರಮುಖ ವಿಷಯಗಳನ್ನು ಪ್ರತಿಪಕ್ಷದ ನಾಯಕರು ಸಂಸತ್ತಿನಲ್ಲಿ ಪ್ರಸ್ತಾಪಿಸಲಿದ್ದಾರೆ' ಎಂದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಶರದ್ ಪವಾರ್ (ಎನ್‌ಸಿಪಿ-ಎಸ್‌ಪಿ) , ಉದ್ಧವ್ ಠಾಕ್ರೆ (ಶಿವಸೇನಾ-ಯುಬಿಟಿ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ), ತೇಜಸ್ವಿ ಯಾದವ್ (ಆರ್‌ಜೆಡಿ), ರಾಮ್ ಗೋಪಾಲ್ ಯಾದವ್ (ಎಸ್‌ಪಿ), ತಿರುಚ್ಚಿ ಶಿವ (ಡಿಎಂಕೆ) ಎಂ.ಎ. ಬೇಬಿ, ಡಿ. ರಾಜಾ (ಸಿಪಿಐ), ದೀಪಂಕರ್ ಭಟ್ಟಾಚಾರ್ಯ (ಸಿಪಿಐಎಂಎಲ್) ಮತ್ತಿತರ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries