ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಮಾರು ₹11,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಎರಡು ಪ್ರಮುಖ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು.
ದ್ವಾರಕಾ ಎಕ್ಸ್‌ಪ್ರೆಸ್‌ವೇಯ ದೆಹಲಿ ವಿಭಾಗ ಮತ್ತು ನಗರ ವಿಸ್ತರಣಾ ರಸ್ತೆ-IIರ ಒಂದು ಭಾಗವನ್ನು ಅವರು ಉದ್ಘಾಟಿಸಿದ್ದು, ಇದು ರಾಜಧಾನಿಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪ್ರಯಾಣವನ್ನು ವೇಗಗೊಳಿಸಲು ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿದೆ ಎಂದು ವರದಿ ತಿಳಿಸಿದೆ.
ಬಹುನಿರೀಕ್ಷಿತ ಹೆದ್ದಾರಿಗಳನ್ನು ಉದ್ಘಾಟಿಸುವ ಮೊದಲು, ಪ್ರಧಾನಿ ಮೋದಿ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಮೆಗಾ ರೋಡ್‌ಶೋ ನಡೆಸಿದರು.
'ಈ ಯೋಜನೆಗಳು ಜನರ ಜೀವನವನ್ನು ಸುಧಾರಿಸುವ ಮತ್ತು ಸುಗಮ ಚಲನಶೀಲತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ರೂಪಿಸುವ ಪ್ರಧಾನಿ ಮೋದಿಯವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ'ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಯೋಜನೆಗಳ ವಿವರ
ದ್ವಾರಕಾ ಎಕ್ಸ್‌ಪ್ರೆಸ್‌ವೇನ ದೆಹಲಿ ವಿಭಾಗದ 10.1 ಕಿ.ಮೀ ರಸ್ತೆಯನ್ನು ಸುಮಾರು ₹5,360 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಯಶೋಭೂಮಿ, ದೆಹಲಿ ಮೆಟ್ರೊದ ನೀಲಿ ಮತ್ತು ಕಿತ್ತಳೆ ಮಾರ್ಗಗಳು, ಮುಂಬರುವ ಬಿಜ್ವಾಸನ್ ರೈಲ್ವೆ ನಿಲ್ದಾಣ ಮತ್ತು ದ್ವಾರಕಾ ಕ್ಲಸ್ಟರ್ ಬಸ್ ಡಿಪೊಗೆ ಸಂಪರ್ಕವನ್ನು ಕಲ್ಪಿಸುತ್ತದೆ.
ಈ ಎಕ್ಸ್‌ಪ್ರೆಸ್‌ವೇನ ಹರಿಯಾಣದ ಭಾಗವನ್ನು 2024ರ ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದರು.
ಇದೇವೇಳೆ, ಸುಮಾರು ₹5,580 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ನಗರ ವಿಸ್ತರಣಾ ರಸ್ತೆ-IIರ ಅಲಿಪುರ್-ಡಿಚಾನ್ ಕಲನ್ ಮಾರ್ಗ ಮತ್ತು ಬಹದ್ದೂರ್‌ಗಢ ಹಾಗೂ ಸೋನಿಪತ್‌ಗೆ ಹೊಸ ಸಂಪರ್ಕ ಮಾರ್ಗಗಳನ್ನು ಸಹ ಉದ್ಘಾಟಿಸಿದರು.
ಇದು ದೆಹಲಿಯ ಒಳ ಮತ್ತು ಹೊರ ವರ್ತುಲ ರಸ್ತೆಗಳಿಂದ ಭಾರೀ ವಾಹನ ದಟ್ಟಣೆಯನ್ನು ಬೇರೆಡೆಗೆ ತಿರುಗಿಸುವ ಮತ್ತು ಮುಖರ್ಬಾ ಚೌಕ್, ಧೌಲಾ ಕುವಾನ್ ಮತ್ತು ರಾಷ್ಟ್ರೀಯ ಹೆದ್ದಾರಿ 9ರ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.




