ನವದೆಹಲಿ: ಭಾರತದ ಉತ್ಪನ್ನಗಳ ಮೇಲೆ ಶೇ 25ರಷ್ಟು ಸುಂಕ ಹಾಗೂ ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ತೈಲ ಖರೀದಿ ಮಾಡುತ್ತಿರುವುದಕ್ಕೆ ದಂಡ ವಿಧಿಸುವ ಅಮೆರಿಕದ ಕ್ರಮವನ್ನು ಖಂಡಿಸಿ ಆ.13ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳು (ಸಿಟಿಯು) ಮತ್ತು ಸಂಯುಕ್ತ ಕಿಸಾನ್ ಮೋರ್ಚ್ (ಎಸ್‌ಕೆಎಂ) ಕರೆ ನೀಡಿವೆ.
'ಅಮೆರಿಕದ ಈ ಕ್ರಮವು ಭಾರತದ ಮೇಲಿನ ಆರ್ಥಿಕ ದಬ್ಬಾಳಿಕೆಯ ಕೃತ್ಯ' ಎಂದು ಸಿಟಿಯು-ಎಸ್‌ಕೆಎಂ ದೂರಿವೆ.
ಆಕ್ರಮಣಕಾರಿ ಕ್ರಮವು ಅಮೆರಿಕದ ವ್ಯಾಪಾರ ನೀತಿಯ ಬೂಟಾಟಿಕೆಯನ್ನು ತೋರಿಸುತ್ತದೆ. ಅಲ್ಲದೆ, ಆ ದೇಶದ ಕಂಪನಿಗಳಿಗೆ ಮುಕ್ತ ಮಾರುಕಟ್ಟೆ ತೆರೆಯಲು ಒತ್ತಾಯಿಸುತ್ತದೆ. ಸಾರ್ವಭೌಮ ರಾಷ್ಟ್ರಗಳನ್ನು ಬೆದರಿಸಲು ಸುಂಕವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ ಎಂದು ಆರೋಪಿಸಿವೆ.
ಟ್ರಂಪ್ ಅವರ ಸುಂಕ ಹೇರಿಕೆಯ ಬೆದರಿಕೆಯನ್ನು ತಿರಸ್ಕರಿಸಬೇಕು. ಜಗತ್ತಿನ ಎಲ್ಲ ರಾಷ್ಟ್ರಗಳೊಂದಿಗೆ ವ್ಯಾಪಾರ ನಡೆಸುವ ತನ್ನ ಸಾರ್ವಭೌಮ ಅಧಿಕಾರವನ್ನು ಭಾರತ ಪ್ರತಿಪಾದಿಸಬೇಕು ಎಂದು ಆಗ್ರಹಿಸಿವೆ.




