HEALTH TIPS

ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ₹18.5 ಲಕ್ಷ ಕಳೆದುಕೊಂಡ ವೃದ್ಧೆ!

ಮುಂಬೈ: ದಟ್ಟಣೆಯ ಕಿರಿಕಿರಿ, ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದ ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳನ್ನು ಮನೆಗೆ ತರಿಸಿಕೊಳ್ಳುವವರ ಸಂಖ್ಯೆ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಮನೆಗೆ ವಸ್ತುಗಳೂ ತಲುಪುತ್ತಿವೆ.

ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು, ವಿವಿಧ ಹೆಸರಿನಲ್ಲಿ ನೂತನ ಆಯಪ್‌ ಸೃಷ್ಟಿಸಿಕೊಂಡು ಜನರ ಹಣವನ್ನು ದೋಚುತ್ತಿದ್ದಾರೆ.

ಹೌದು, ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಮುಂಬೈನ 71 ವರ್ಷದ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಒಂದು ಲೀಟರ್ ಹಾಲನ್ನು ಆರ್ಡರ್ ಮಾಡಲು ಪ್ರಯತ್ನಿಸಿ ಮೂರು ಬ್ಯಾಂಕ್ ಖಾತೆಗಳಿಂದ ₹18.5 ಲಕ್ಷ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮುಂಬೈನ ವಡಾಲಾ ನಿವಾಸಿಯಾಗಿರುವ ಮಹಿಳೆಯು ಈ ತಿಂಗಳ ಆರಂಭದಲ್ಲಿ ಆನ್‌ಲೈನ್ ಅಪ್ಲಿಕೇಶನ್‌ ಮೂಲಕ ಹಾಲು ಆರ್ಡರ್ ಮಾಡಲು ಪ್ರಯತ್ನಿಸಿದ್ದರು. ಇದಾಗಿ ಎರಡು ದಿನಗಳಲ್ಲಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಆಗಸ್ಟ್ 4ರಂದು ಹಾಲು ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಮಹಿಳೆಗೆ ಕರೆ ಮಾಡಿ ಹಾಲು ಆರ್ಡರ್ ಮಾಡಲು ನಿಮ್ಮ ಸಂಪೂರ್ಣ ವಿವರಗಳನ್ನು ನೀಡುವಂತೆ ಸೂಚಿಸಿ ಮೊಬೈಲ್‌ಗೆ ಲಿಂಕ್‌ವೊಂದನ್ನು ಕಳುಹಿಸಿದ್ದರು. ಜತೆಗೆ, ಕರೆಯನ್ನು ಕಡಿತಗೊಳಿಸದೆ ಲಿಂಕ್ ಅನ್ನು ಕ್ಲಿಕ್ ಮಾಡಿ ಮುಂದಿನ ಸೂಚನೆಗಳನ್ನು ಅನುಸರಿಸುವಂತೆ ಸೂಚಿಸಿದ್ದರು. ಕರೆಯನ್ನು ಒಂದು ಗಂಟೆಗೂ ಹೆಚ್ಚು ಕಾಲ ಮುಂದುವರಿಸಿದ್ದರಿಂದ ಬೇಸರಗೊಂಡಿದ್ದ ಮಹಿಳೆಯು ಕರೆಯನ್ನು ಸ್ಥಗಿತಗೊಳಿಸಿದ್ದರು' ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

'ಮಹಿಳೆಯು ಮರುದಿನ ಅದೇ ಆರೋಪಿಯಿಂದ ಫೋನ್ ಕರೆ ಸ್ವೀಕರಿಸಿದ್ದರು. ಜತೆಗೆ, ಆತನೊಂದಿಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿದ್ದರು. ಕೆಲವು ದಿನಗಳ ಬಳಿಕ ಮಹಿಳೆ ಬ್ಯಾಂಕ್‌ಗೆ ಭೇಟಿ ನೀಡಿದ್ದ ವೇಳೆ ತಮ್ಮ ಒಂದು ಖಾತೆಯಿಂದ ₹1.7 ಲಕ್ಷ ವಂಚಿಸಲಾಗಿದೆ ಎಂಬುದನ್ನು ಕಂಡುಕೊಂಡಿದ್ದರು. ಬಳಿಕ ಮತ್ತಷ್ಟು ಪರಿಶೀಲನೆ ನಡೆಸಿದಾಗ ಆಕೆಯ ಮತ್ತೆರಡು ಬ್ಯಾಂಕ್ ಖಾತೆಗಳಲ್ಲಿದ್ದ ಬಹಳಷ್ಟು ಹಣ ಕಳೆದುಕೊಂಡಿರುವುದು ದೃಢಪಟ್ಟಿತ್ತು' ಎಂದು ಅವರು ಮಾಹಿತಿ ನೀಡಿದ್ದಾರೆ.

ಮೊಬೈಲ್‌ಗೆ ಕಳುಹಿಸಿದ ಲಿಂಕ್ ಅನ್ನು ಮಹಿಳೆ ಕ್ಲಿಕ್ ಮಾಡಿದ ಕೂಡಲೇ ಆರೋಪಿಗಳು ಫೋನ್ ಅನ್ನು ಹ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯ ಮೂರು ಬ್ಯಾಂಕ್ ಖಾತೆಗಳಲ್ಲಿ ಒಟ್ಟು ₹18.5 ಲಕ್ಷ ವಂಚಿಸಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ,




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries