ಕಾಸರಗೋಡು: ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯು ಮಾರುಕಟ್ಟೆಯಲ್ಲಿರುವ ಪ್ರಮುಖ ಬ್ರ್ಯಾಂಡ್‍ಗಳೊಂದಿಗೆ ಸ್ಪರ್ಧಿಸಬಹುದಾದ, ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲಾಗುತ್ತಿದೆ ಎಂದು ಸಹಕಾರಿ, ಬಂದರು ಮತ್ತು ಮುಜರಾಯಿ ಖಾತೆ ಸಚಿವ ವಿ.ಎನ್. ವಾಸವನ್ ತಿಳಿಸಿದ್ದಾರೆ.
ಅವರು ಕಾಞಂಗಾಡಿನಲ್ಲಿ ಆಯೋಜಿಸಲಾಗಿದ್ದ ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿ ಮತ್ತು ಪಯ್ಯನ್ನೂರು ಖಾದಿ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ 'ಓಣಂ ಖಾದಿ ಮೇಳ 2025'ರ ಜಿಲ್ಲಾ ಮಟ್ಟದ ಮಾರಾಟ ಮೇಳವನ್ನು ಉದ್ಘಾಟಿಸಿದರು. ಈ ವರ್ಷದ ಖಾದಿ ಮೇಳದ "ನನಗೂ ಖಾದಿ ಬೇಕು" ಎಂಬ ಘೋಷಣೆಯೊಂದಿಗೆ ಖಾದಿ ಬಟ್ಟೆ ಮಾರಾಟ ವ್ಯವಸ್ಥೆ ಏರ್ಪಡಿಸಲಾಗಿದೆ. ಮೇಳದ ಅಂಗವಾಗಿ, ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯ ವಿವಿಧ ಖಾದಿ ಸೌಭಾಗ್ಯ ಕೇಂದ್ರಗಳ ಮೂಲಕ ವಿವಿಧ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು.
ಕಾಞಂಗಾಡಿನ ಹಳೇ ಬಸ್ ನಿಲ್ದಾಣದ ಸೌಭಾಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಚ್.ಕುಞಂಬು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಖಾದಿಯ ನಿಯಮಿತ ಗ್ರಾಹಕ ಮತ್ತು ಸಾಮಾಜಿಕ ಕಾರ್ಯಕರ್ತ ಎಂ.ಕೆ.ವಿನೋದ್ ಅವರಿಗೆ ಕಾಞಂಗಾಡ್ ನಗರಸಭಾ ಅಧ್ಯಕ್ಷೆ ಕೆ.ವಿ. ಸುಜಾತ ಅವರು ಬಟ್ಟೆ ನೀಡುವ ಮೂಲಕ ಮೊದಲ ಮಾರಾಟವನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲಾ ಮತ್ತು ಮಾಜಿ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್ ಉಪಸ್ಥಿತರಿದ್ದರು. ಚಲನಚಿತ್ರ ನಟ ಸಂತೋಷ್ ಕಿಯಾಟ್ಟೂರ್ ಉಪಸ್ಥಿತರಿದ್ದರು. ಪಯ್ಯನ್ನೂರು ಖಾದಿ ಕೇಂದ್ರದ ನಿರ್ದೇಶಕ ವಿ. ಶಿಬು ಸ್ವಾಗತಿಸಿದರು. ಯೋಜನಾಧಿಕಾರಿ ಪಿ. ಸುಭಾಷ್ ವಂದಿಸಿದರು.


