ಮಂಜೇಶ್ವರ: ಶ್ರೀಕ್ಷೇತ್ರ ಸಂತಡ್ಕ ಮಾಡದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಭಕ್ತಿ-ಭಾವಗಳಿಂದ ಬುಧವಾರ ಜರಗಿತು. ಬೆಳಿಗ್ಗೆ ಗಣಪತಿ ಪ್ರತಿಷ್ಠಾಪನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಗಣಹೋಮ, ಶ್ರೀ ದೈವಗಳಿಗೆ ತಂಬಿಲ, ಭಜನೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನ 2.45ಕ್ಕೆ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಅಧ್ಯಕ್ಷ ಹಾಗೂ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಶ್ರೀಧರ ಭಟ್ ಅವರಿಂದ ಶ್ರೀ ಗಣಪತಿಯ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಈ ಶೋಭಾಯಾತ್ರೆಯಲ್ಲಿ ಟೀಮ್ ಗರುಡ ಸಂತಡ್ಕ ಅವರ ಶಾರದೆ ದೇವಿಯ ಟ್ಯಾಬ್ಲೋ ಮತ್ತು ಶ್ರೀ ಅಯ್ಯಪ್ಪ ಕುಣಿತ ಭಜನಾ ತಂಡ ಬಾಳಿಯೂರು ತಮಡದವರ ಕುಣಿತಭಜನೆ ಭಕ್ತರನ್ನು ಆಕರ್ಷಿಸಿತು.
ಶೋಭಾಯಾತ್ರೆ ಮಾರ್ಗದಲ್ಲಿ ಭಕ್ತಾದಿಗಳು ದೇವರಿಗೆ ಹೂವು, ಗರಿಕೆ, ಹಣ್ಣು, ಕಾಯಿಗಳನ್ನು ಸಮರ್ಪಿಸಿದರು. ಭಕ್ತರಿಗಾಗಿ ಗುಳಿಗ ಕೊರಗಜ್ಜ ಸೇವಾ ಸಮಿತಿ, ಜುಮಾ ಮಸ್ಜಿದ್ ಬಾಳಿಯೂರು, ಮಾಚು ಚಿಗುರುಪಾದೆ, ನಾರಾಯಣ ಕೆ. ಸಂತಡ್ಕ, ತ್ರಿಶೂಲ್ ಫ್ರೆಂಡ್ಸ್ ಕ್ಲಬ್ ಬಾಳಿಯೂರು, ಮೋಹನ್ ದಾಸ್ ಆಳ್ವ ದಡ್ಡಂಗಡಿ, ಓಂ ಫ್ರೆಂಡ್ಸ್ ದಡ್ಡಂಗಡಿ ಸಂಘಟನೆಗಳಿಂದ ಬಾಯಾರಿಕೆ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಯಿತು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪದಾಧಿಕಾರಿಗಳು, ವಿಜಯ ಫ್ರೆಂಡ್ಸ್ ಕ್ಲಬ್*, ಟೀಮ್ ಗರುಡ ಸಂತಡ್ಕ, ಸತ್ಯದ ಮಣ್ಣು ಸಂತಡ್ಕ, ಮಾತೃ ಮಂಡಳಿ ಸಂತಡ್ಕ, ಶ್ರೀ ನಾರಾಯಣ ಗುರು ಫ್ರೆಂಡ್ಸ್ ಕ್ಲಬ್ ಮಾನೂರು ಹಾಗೂ ಗುಳಿಗ ಕೊರಗಜ್ಜ ಸೇವಾ ಸಮಿತಿ ಸದಸ್ಯರು ಸಹಕರಿಸಿದರು.
ಶೋಭಾಯಾತ್ರೆ ಪತ್ವಾಡಿ ತಲುಪಿದಾಗ ಕೊಂಡೆವೂರು ಮಠದ ಪದಾಧಿಕಾರಿಗಳು ಭವ್ಯ ಸ್ವಾಗತ ನೀಡಿದರು. ನಂತರ ಆಟೋಟ ಸ್ಪರ್ಧೆಗಳು ನಡೆದವು. ಶ್ರೀ ಗಣಪತಿಯ ವಿಸರ್ಜನೆ ಕೊಂಡೆವೂರು ಮಠದ ಪದಾಧಿಕಾರಿಗಳ ನೇತೃತ್ವದಲ್ಲಿ ಪತ್ವಾಡಿ ನದಿದಂಡೆಯಲ್ಲಿ ನೆರವೇರಿತು.




.jpg)
.jpg)
.jpg)
