ಡೆಹ್ರಾಡೂನ್: ಮೇಘ ಸ್ಫೋಟ ಕಾರಣದಿಂದ ಉಂಟಾದ ದಿಢೀರ್ ಪ್ರವಾಹದಿಂದ ನಲುಗಿರುವ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಗುರುವಾರವೂ ರಕ್ಷಣಾ ಕಾರ್ಯ ಮುಂದುವರಿಯಿತು.
'ಚಿನೂಕ್ ಹಾಗೂ ಎಂಐ-17 ಹೆಲಿಕಾಪ್ಟರ್‌ಗಳನ್ನು ಬಳಸಿ, 274 ಮಂದಿಯನ್ನು ರಕ್ಷಿಸಲಾಗಿದೆ. 9 ಮಂದಿ ಯೋಧರು, 60 ಜನರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ' ಎಂದು ಸೇನೆ ತಿಳಿಸಿದೆ.
ಹರ್ಶಿಲ್, ಗಂಗೋತ್ರಿ ಹಾಘೂ ಝಾಲಾದಿಂದ 275 ಜನರನ್ನು ಮತಲಿ ಹೆಲಿಪ್ಯಾಡ್‌ಗೆ ಕಳುಹಿಸಲಾಗಿದೆ. ಅವರನ್ನು ಅಲ್ಲಿಂದ ಅವರ ಊರುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ' ಎಂದು ಜಿಲ್ಲಾಧಿಕಾರಿ ಪ್ರಶಾಂತ ಆರ್ಯ ತಿಳಿಸಿದ್ದಾರೆ.
ಮತಲಿ ಹೆಲಿಪ್ಯಾಡ್‌ಗೆ ಕರೆದುಕೊಂಡು ಬಂದವರಲ್ಲಿ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳಿಗೆ ಸೇರಿದವರಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಕಾಶಿಯಲ್ಲಿಯೇ ವಾಸ್ತವ್ಯ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.




