34 ನ್ಯಾಯಾಧೀಶರ ಪೈಕಿ ನ್ಯಾ.ಬಿ.ವಿ.ನಾಗರತ್ನಾ ಅವರು ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿ ಮಂದುವರಿದಿದ್ದಾರೆ.
ಅವರು ಭಾರತದ ಪ್ರಪ್ರಥಮ ಮಹಿಳಾ ಮುಖ್ಯ ನ್ಯಾಯಾಧೀಶರಾಗುವ ಸರದಿಯಲ್ಲಿಯೂ ಇದ್ದಾರೆ.
ಭಾರತದ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ,ವಿಕ್ರಮನಾಥ, ಜೆ.ಕೆ.ಮಹೇಶ್ವರಿ ಮತ್ತು ಬಿ.ವಿ.ನಾಗರತ್ನಾ ಅವರನ್ನೊಳಗೊಂಡ ಕೊಲಿಜಿಯಂ ನ್ಯಾಯಮೂರ್ತಿಗಳಾದ ಆರಾಧೆ ಮತ್ತು ಪಂಚೋಲಿಯವರ ಪದೋನ್ನತಿಗೆ ಶಿಫಾರಸು ಮಾಡಿದ್ದು,ಕೇಂದ್ರವು ಆ.27ರಂದು ಅದನ್ನು ಅಂಗೀಕರಿಸಿತ್ತು.
ಆದಾಗ್ಯೂ ನ್ಯಾ.ಪಂಚೋಲಿಯವರು ಹೈಕೋರ್ಟ್ ನ್ಯಾಯಾಧೀಶರ ಜ್ಯೇಷ್ಠತಾ ಪಟ್ಟಿಯಲ್ಲಿ 57ನೇ ಸ್ಥಾನದಲ್ಲಿದ್ದರಿಂದ ಅವರ ಪದೋನ್ನತಿ ಚರ್ಚೆಗೆ ಕಾರಣವಾಗಿತ್ತು. ಕೊಲಿಜಿಯಂ ಸದಸ್ಯೆ ನ್ಯಾ.ಬಿ.ವಿ.ನಾಗರತ್ನಾ ಅವರ ನೇಮಕಾತಿಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅವರ ನೇಮಕಾತಿಯು ಕೊಲಿಜಿಯಂ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯಾಯದ ಆಡಳಿತದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ನ್ಯಾ.ಬಿ.ವಿ.ನಾಗರತ್ನಾ ಹೇಳಿದ್ದರೆನ್ನಲಾಗಿದೆ.
ಪದೋನ್ನತಿಗೆ ಮೂವರು ಹಿರಿಯ ಮಹಿಳಾ ಹೈಕೋರ್ಟ್ ನ್ಯಾಯಾಧೀಶರಾದ ಸುನಿತಾ ಅಗರವಾಲ್, ರೇವತಿ ಮೋಹಿತೆ ಡೇರೆ ಮತ್ತು ಲಿಸಾ ಗಿಲ್ ಅವರನ್ನು ಕಡೆಗಣಿಸಿದ್ದು ಸಹ ಟೀಕೆಗಳಿಗೆ ಗುರಿಯಾಗಿತ್ತು. 2021ರಲ್ಲಿ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಬೇಲಾ ತ್ರಿವೇದಿ ಮತ್ತು ಬಿ.ವಿ.ನಾಗರತ್ನಾ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯಕ್ಕೆ ಮಹಿಳಾ ನ್ಯಾಯಾಧೀಶರನ್ನು ನೇಮಕ ಮಾಡಲಾಗಿಲ್ಲ.
ಗುಜರಾತ್ ಉಚ್ಚ ನ್ಯಾಯಾಲಯಕ್ಕೆ ಸೇರಿದ ನ್ಯಾ.ಪಂಚೋಲಿ ಅವರು 2031ರಲ್ಲಿ ಭಾರತದ 60ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಳ್ಳಲಿದ್ದಾರೆ. ಅವರು ಗುಜರಾತ್ ಹೈಕೋರ್ಟ್‌ನಿಂದ ಸರ್ವೋಚ್ಚ ನ್ಯಾಯಾಲಯದ ಮೂರನೇ ಹಾಲಿ ನ್ಯಾಯಾಧೀಶರಾಗಿದ್ದಾರೆ.




