ಮಥುರಾ: ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಥುರಾಕ್ಕೆ 50 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 16ರಂದು ಶ್ರೀಕೃಷ್ಣನ 5,252 ನೇ ಜನ್ಮ ದಿನಾಚರಣೆಯನ್ನು ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನ ಸೇರಿದಂತೆ ನಗರದ ಎಲ್ಲಾ ಪ್ರಮುಖ ದೇವಾಲಯ ಹಾಗೂ ವೃಂದಾವನದ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಆಚರಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮಥುರಾ, ವೃಂದಾವನ, ಬರ್ಸಾನ, ಗೋಕುಲ, ನಂದಗಾಂವ್, ಗೋವರ್ಧನ ಮತ್ತು ಮಹಾವನ ಸೇರಿದಂತೆ ಎಲ್ಲಾ ಯಾತ್ರಾ ಕೇಂದ್ರಗಳಲ್ಲಿ ಸಿದ್ಧತೆಯ ಜತೆಗೆ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಕುಮಾರ್ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಕೃತಕ ಬುದ್ದಿಮತ್ತೆ (ಎಐ) ನಿಯಂತ್ರಿತ ಡ್ರೋನ್ ಕ್ಯಾಮೆರಾಗಳನ್ನು ಅಳವಡಿಸಿದ್ದು, ಮಥುರಾ ನಗರದ ಪ್ರಮುಖ ಸ್ಥಳಗಳು ಕ್ಯಾಮೆರಾಗಳ ಕಣ್ಗಾವಲಿನಲ್ಲಿವೆ ಎಂದು ಕುಮಾರ್ ಹೇಳಿದ್ದಾರೆ.
ನಗರದಾದ್ಯಂತ ಸ್ವಚತಾ ಕಾರ್ಯ ಸೇರಿದಂತೆ ಆಚರಣೆಗೆ ಸಂಬಂಧಿಸಿದ ಸಿದ್ಧತೆ ಕಾರ್ಯಗಳು ಯುದ್ಧೋಪಾದಿಯಲ್ಲಿ ಸಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲು ವಿವಿಧ ರಾಜ್ಯಗಳಿಂದ ಕಲಾವಿದರು ಆಗಮಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನ್ಮಾಷ್ಟಮಿಯ ವೇಳೆ ವೃಂದಾವನಕ್ಕೆ ವೃದ್ಧರು, ಮಕ್ಕಳು, ಗರ್ಭಿಣಿಯರು, ಅಂಗವಿಕಲರು ಸೇರಿದಂತೆ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳು ಆಗಮಿಸದಂತೆ ಆಡಳಿತ ಮಂಡಳಿ ಮನವಿ ಮಾಡಿದೆ.




