ಡೆಹ್ರಾಡೂನ್: ಮೇಘ ಸ್ಫೋಟ ಕಾರಣದಿಂದ ಉಂಟಾದ ದಿಢೀರ್ ಪ್ರವಾಹದಿಂದ ನಲುಗಿರುವ ವಿವಿಧ ಪ್ರದೇಶಗಳಲ್ಲಿ ಶುಕ್ರವಾರವೂ ರಕ್ಷಣಾ ಕಾರ್ಯ ಮುಂದುವರಿಯಿತು.
'ಚಿನೂಕ್ ಹಾಗೂ ಎಂಐ-17 ಹೆಲಿಕಾಪ್ಟರ್‌ಗಳನ್ನು ಬಳಸಿ ಶುಕ್ರವಾರ ಬೆಳಗ್ಗೆ 80 ಜನರನ್ನು ರಕ್ಷಣೆ ಮಾಡಲಾಯಿತು.
ಅವರನ್ನು ಐಟಿಬಿಪಿಯ ಮಾಟ್ಲಿ ಹೆಲಿಪ್ಯಾಡ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈವರೆಗೂ 354 ಮಂದಿಯನ್ನು ರಕ್ಷಿಸಲಾಗಿದೆ. 9 ಮಂದಿ ಯೋಧರು, 60 ಜನರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಸೇನೆ ತಿಳಿಸಿದೆ.
ಉತ್ತರಕಾಶಿಯ ಧರಾಲಿ, ಮುಖ್ಬಾ ಗ್ರಾಮದಲ್ಲಿ ನಾಪತ್ತೆಯಾದವರ ಶೋಧಕ್ಕೆ ಅಗತ್ಯವಿರುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ವಾಯುಪಡೆ ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಸ್ತೆಗಳು ಕುಸಿದಿರುವುದರಿಂದ ಸಂತ್ರಸ್ತರ ಸ್ಥಳಾಂತರಕ್ಕೆ ತೊಡಕಾಗಿದ್ದು ವಾಯು ಮಾರ್ಗದ ಮೂಲಕ ರಕ್ಷಣೆ ಮಾಡಲಾಗುತ್ತಿದೆ. ಅವರಿಗೆ ಅಗತ್ಯ ಸಾಮಗ್ರಿಗಳು ಹಾಗೂ ಆಹಾರವನ್ನು ಹೆಲಿಕಾಪ್ಟರ್‌ಗಳ ಮೂಲಕ ತಲುಪಿಸಲಾಗುತ್ತಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ಹೇಳಿದರು.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರ ಕಾಶಿಯಲ್ಲಿಯೇ ವಾಸ್ತವ್ಯ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಶುಕ್ರವಾರ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು 'ಇಂದು ಬೆಳಗ್ಗೆ ಧರಾಲಿಯಲ್ಲಿ ನಡೆಯುತ್ತಿರುವ ರಕ್ಷಣಾ ಕೆಲಸ ಹಾಗೂ ಪರಿಹಾರ ಕಾರ್ಯಗಳನ್ನು ಪರಿಶೀಲನೆ ಮಾಡಿದ್ದೇನೆ' ಎಂದು ತಿಳಿಸಿದ್ದಾರೆ.
ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ಒಂದು ತಿಂಗಳ ವೇತನವನ್ನು ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ಸಂತ್ರಸ್ತರೊಂದಿಗೆ ರಾಜ್ಯ ಸರ್ಕಾರ ನಿಂತಿದೆ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಾಯ ಮಾಡುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.




