HEALTH TIPS

ರಾಜೀವ್ ಗಾಂಧಿ 81ನೇ ಜನ್ಮದಿನ: PM ಮೋದಿ, ಖರ್ಗೆ ಗೌರವ ನಮನ; ಸದ್ಭಾವನಾ ದಿನ ಆಚರಣೆ

ನವದೆಹಲಿ: ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ 81ನೇ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಮುಖಂಡರು ಬುಧವಾರ ಗೌರವ ನಮನ ಸಲ್ಲಿಸಿದರು.

ರಾಜೀವ್ ಗಾಂಧಿ ಅವರ ಸ್ಮಾರಕವಿರುವ ವೀರ ಭೂಮಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, 'ರಾಜೀವ್ ಗಾಂಧಿ ಅವರ ಜನ್ಮದಿನದಂದು ನನ್ನ ಗೌರವ ನಮನಗಳು' ಎಂದು ಬರೆದುಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, 'ರಾಜೀವ್ ಗಾಂಧಿ ಅವರನ್ನು ಸ್ಮರಿಸುವ ಈ ದಿನ ಸದ್ಭಾವನಾ ದಿನವೂ ಹೌದು. ಕೋಟ್ಯಂತರ ಜನರಲ್ಲಿ ಭರವಸೆ ಮೂಡಿಸಿದ ಹಾಗೂ 21ನೇ ಶತಮಾನಕ್ಕೆ ಭಾರತವನ್ನು ಸಜ್ಜುಗೊಳಿಸಿದ ಧೀಮಂತ ನಾಯಕ ಅವರು. ದೇಶದ ಅಸಂಖ್ಯಾತ ಸಾಧನೆಗಳಿಗೆ ಅವರು ಕಾರಣೀಭೂತರು. ರಾಜೀವ್ ಅವರು ಹಾಕಿಕೊಟ್ಟ ಅಭಿವೃದ್ಧಿಯ ಪರಂಪರೆಯು ದೇಶದ ಗಮನಾರ್ಹ ಬದಲಾವಣೆಗೆ ಕಾರಣವಾಗಿವೆ. ಅವರ ಜನ್ಮದಿನದಂದು ನಮ್ಮ ಗೌರವ ನಮನಗಳು' ಎಂದು ಬರೆದಿದ್ದಾರೆ.

'18ನೇ ವಯೋಮಾನಕ್ಕೆ ಮತದಾನದ ಹಕ್ಕು, ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ, ಟೆಲಿಕಾಂ ಮತ್ತು ಐಟಿ ಕ್ಷೇತ್ರದಲ್ಲಿ ಕ್ರಾಂತಿ, ಕಂಪ್ಯೂಟರ್ ಬಳಕೆಗೆ ವೇಗ, ಶಾಂತಿ ಒಪ್ಪಂದಗಳ ಮುಂದುವರಿಕೆ, ಮಹಿಳಾ ಸಬಲೀಕರಣ, ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ, ನೂತನ ಶಿಕ್ಷಣ ನೀತಿ ಮೂಲಕ ರಾಜೀವ್ ಗಾಂಧಿ ಅವರು ದೇಶವನ್ನು ಹೊಸ ಯುಗದೆಡೆ ಕರೆದೊಯ್ದರು' ಎಂದು ಖರ್ಗೆ ನೆನಪಿಸಿಕೊಂಡಿದ್ದಾರೆ.

ತಮ್ಮ ಕುಟುಂಬದೊಂದಿಗೆ ವೀರ ಭೂಮಿಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ ಪ್ರಿಯಾಂಕಾ ಗಾಂಧಿ, 'ನಿಮ್ಮಿಂದ ನಾವು ಕರುಣೆ, ಪ್ರೀತಿ ಹಾಗೂ ದೇಶಭಕ್ತಿಯ ಧರ್ಮವನ್ನು ಪಡೆದಿದ್ದೇವೆ. ಅದನ್ನು ನಾವು ನಿರಂತರವಾಗಿ ಪಾಲಿಸುತ್ತೇವೆ. ನಮ್ಮನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮನ್ನು ತಡೆಯಲು ಯಾರಿಂದಲೂ ಆಗದು. ಹಾಗೆಯೇ ನಮ್ಮ ಹೆಜ್ಜೆಗಳು ಎಂದಿಗೂ ತಪ್ಪುವುದಿಲ್ಲ' ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries