HEALTH TIPS

ಸೀಳು ತುಟಿಯಿಂದಾಗಿ 8 ವರ್ಷದಿಂದ ಮಾತನಾಡದ ಬಾಲಕನಿಗೆ ಮಾತು ಕಲಿಸಿದ ಸೇನಾ ವೈದ್ಯ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಹಳ್ಳಿಯೊಂದರ ಅಕ್ಷಯ್‌ ಶರ್ಮಾ ಎಂಬ ಬಾಲಕ 8 ವರ್ಷವಾದರೂ ಮಾತನಾಡಲು ಆಗದೆ ಪರಿತಪಿಸುತ್ತಿದ್ದ.

ಸೀಳು ತುಟಿಯೊಂದಿಗೆ ಹುಟ್ಟಿದ್ದ ಆತ, ಮೂರು ವರ್ಷದವನಾಗಿದ್ದಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾದರೂ ಮಾತು ಬಂದಿರಲಿಲ್ಲ.

ಸೇನೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುವ ಆತನ ತಂದೆ-ತಾಯಿ, ಮಗನ ಮಾತು ಕೇಳುವುದಕ್ಕಾಗಿ ಸಾಕಷ್ಟು ಶ್ರಮಿಸಿದ್ದರು. ಕೊನೆಗೆ ಅವರೂ ಕೈಚೆಲ್ಲಿ ಕೂರುವ ಹಂತ ತಲುಪಿದ್ದರು. ಮಗನ ಮಾತು ಕೇಳಿಸಿಕೊಳ್ಳಬೇಕೆಂಬ ಹಂಬಲವನ್ನು ಬಹುತೇಕ ಕೈಬಿಟ್ಟಿದ್ದರು.

ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಬಂದವರು ಸೇನಾ ವೈದ್ಯ ಕ್ಯಾಪ್ಟನ್‌ ಸೌರಭ್‌ ಸಾಲುಂಖೆ.

'ಈ ಪ್ರದೇಶದಲ್ಲಿ ಸೇನಾ ವೈದ್ಯರಾಗಿ ಕೆಲಸ ಮಾಡುತ್ತಿರುವ ಸೌರಭ್‌ ಅವರು ಅಕ್ಷಯ್‌ನನ್ನು ಭೇಟಿಯಾಗಿದ್ದರು. ಆದಾದ ನಂತರ ಅಕ್ಷಯ್‌ ಪೋಷಕರ ನಿರೀಕ್ಷೆಗೆ ಮರುಜೀವ ಬಂದಿತ್ತು' ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ಸುನೀಲ್‌ ಬರ್ತ್ವಾಲ್‌ ತಿಳಿಸಿದ್ದಾರೆ.

ಬಾಲಕನನ್ನು ಪರೀಕ್ಷೆ ಮಾಡಿದ ಸೌರಭ್‌, ಸೂಕ್ತ ಚಿಕತ್ಸೆ ನೀಡಿದರೆ ಆತ ಮಾತನಾಡಬಲ್ಲ ಎಂಬುದನ್ನು ಅರಿತರು. ದೂರದ ಹಳ್ಳಿಯಲ್ಲಿ ಸರಿಯಾದ ಸೌಲಭ್ಯಗಳು ದೊರೆಯದ ಕಾರಣ ಆತನಿಗೆ ಸ್ವತಃ ಚಿಕಿತ್ಸೆ ಮತ್ತು ತರಬೇತಿ ನೀಡಲು ಮುಂದಾದರು. ಸುಮಾರು ಎಂಟು ವಾರಗಳ ಕಾಲ, ನಿತ್ಯವೂ ಎರಡರಿಂದ ಮೂರು ತಾಸನ್ನು ಮೀಸಲಿರಿಸಿ ಆತನಿಗೆ ಮಾರ್ಗದರ್ಶನ ನೀಡಿದರು ಎಂದು ಮಾಹಿತಿ ನೀಡಿದ್ದಾರೆ.

'ನೀರು ಮುಕ್ಕಳಿಸುವುದು, ನಾಲಿಗೆ ಮತ್ತು ದವಡೆಗೆ ಅಭ್ಯಾಸ ಮಾಡಿಸುವುದರಿಂದ ಆರಂಭವಾದ ತರಬೇತಿ, ಕ್ರಮೇಣ ಮೂಗು ಮತ್ತು ಬಾಯಿಯ ಶಬ್ದಗಳನ್ನು ಪ್ರತ್ಯೇಕಿಸುವುದು, ತುಟಿ, ಅಂಗುಳಿನಿಂದ ಶಬ್ದಗಳನ್ನು ಹೊರಡಿಸುವುದು ಹಾಗೂ ಗಂಟಲಿನ ಮೂಲಕ ಶಬ್ದ ಮಾಡುವುದನ್ನು ಕಲಿಯುವವರೆಗೆ ಸಾಗಿತು. ಅದಾದ ನಂತರ, ಅಕ್ಷಯ್‌ ಆತ್ಮವಿಶ್ವಾಸದಿಂದ ಸಣ್ಣ ಸಣ್ಣ ಪದಗಳು, ವಾಕ್ಯಗಳನ್ನು ರಚಿಸಿ ಮಾತನಾಡಲಾರಂಭಿಸಿದ' ಎಂದು ಪಿಆರ್‌ಒ ವಿವರಿಸಿದ್ದಾರೆ.

ಬಾಲಕ ಸದ್ಯ ದುಗ್ಗಾನ್‌ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾನೆ.

ಅಕ್ಷಯ್‌ ಮಾತನಾಡುತ್ತಿರುವುದನ್ನು ಕೇಳಿ ಕಣ್ತುಂಬಿಕೊಂಡ ಆತನ ಪೋಷಕರು, 'ಇದು ಪವಾಡಕ್ಕಿಂತ ಕಡಿಮೆ ಏನಲ್ಲ' ಎಂದು ಹೇಳಿದ್ದಾರೆ.

'ಒಬ್ಬ ಯೋಧನ (ಸೇನಾ ವೈದ್ಯರ) ಅನುಕಂಪದಿಂದ ಆರಂಭವಾದ ಈ ಕಾರ್ಯವು, ಇಡೀ ಸಮುದಾಯವನ್ನೇ ಪ್ರೇರೇಪಿಸಿದೆ. ಸೇನೆಯು ದೇಶದ ಗಡಿಗಳನ್ನು ರಕ್ಷಿಸುವುದಷ್ಟೇ ಅಲ್ಲದೆ, ಜನರ ಬದುಕನ್ನು ಗಾಢವಾಗಿ ಸ್ಪರ್ಶಿಸುತ್ತದೆ ಎಂಬದನ್ನು ಇದು ನೆನಪಿಸುತ್ತದೆ' ಎಂದು ಸುನೀಲ್‌ ಪ್ರತಿಪಾದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries