ಚೆನ್ನೈ: ರೈಲ್ವೆ ಹಳಿ ದಾಟುವ ಆನೆಗಳ ಸುರಕ್ಷತೆ ಖಾತ್ರಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನ ಬಳಸಿರುವ ತಮಿಳುನಾಡು ಅರಣ್ಯ ಇಲಾಖೆ ಈ ಕುರಿತ ವಿಡಿಯೊ ಬಿಡುಗಡೆ ಮಾಡಿದೆ.
ಕೊಯಮತ್ತೂರಿನ ಮದುಕ್ಕರೈನಲ್ಲಿನ ರೈಲ್ವೆ ಹಳಿಯ ಮೇಲೆ ಮರಿಗಳೊಂದಿಗೆ ಹಳಿ ದಾಟುತ್ತಿರುವ ಆನೆ ಹಿಂಡಿನ ದೃಶ್ಯ ವಿಡಿಯೊದಲ್ಲಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಇಲಾಖೆ, 'ಕೃತಕ ಬುದ್ಧಿಮತ್ತೆ ಆಧಾರಿತ ಮುನ್ನೆಚ್ಚರಿಕೆ ವ್ಯವಸ್ಥೆಯ ಮೂಲಕ 2023ರ ನವೆಂಬರ್‌ನಿಂದ ಈವರೆಗೆ ಯಾವೊಂದು ಆನೆಗಳ ಸಾವು ಸಂಭವಿಸಿಲ್ಲ. 12 ಟವರ್‌ಗಳು, 24 ಕ್ಯಾಮೆರಾ, 25 ಅರಣ್ಯ ಸಿಬ್ಬಂದಿ ಕಣ್ಗಾವಲಿನಲ್ಲಿ 6,592 ಆನೆಗಳು ಸುರಕ್ಷಿತವಾಗಿ ಹಳಿ ದಾಟಿವೆ' ಎಂದು ಮಾಹಿತಿ ಹಂಚಿಕೊಂಡಿದೆ. ಮುಂದುವರಿದು, 'ಪ್ರತಿಯೊಂದು ಆನೆಯೂ ಮುಖ್ಯ. ಬದ್ಧತೆಯ ಜತೆಗೆ ತಂತ್ರಜ್ಞಾನವೂ ಬೆಸೆದಾಗ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ತಮಿಳುನಾಡು ಸಾಬೀತುಮಾಡಿದೆ' ಎಂದು ಬರೆದುಕೊಂಡಿದೆ.




