ನವದೆಹಲಿ: ಕರಡು ಪರಿಷ್ಕರಣೆ ವೇಳೆ ಮತದಾರರು ಸಲ್ಲಿಸಬೇಕಾಗಿದ್ದ 7 ದಾಖಲೆಗಳಿಂತ, ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಸಲ್ಲಿಸಬೇಕಾಗಿರುವ 11 ದಾಖಲೆಗಳು ಮತದಾರರ ಸ್ನೇಹಿ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: ಸಂಸತ್ ಆವರಣದಲ್ಲಿ ವಿಪಕ್ಷಗಳ ಧರಣಿ
ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ಜೂನ್ 24ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠವು ಬುಧವಾರವೂ ಮುಂದುವರಿಸಿತು.
ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಸ್ವೀಕರಿಸದಿರುವ ನಿರ್ಧಾರವು ಮತದಾರರ ಪಟ್ಟಿಯಿಂದ ನಾಗರಿಕರನ್ನು ಹೊರಗಿಡುವ ಹುನ್ನಾರ ಎನ್ನುವ ಅರ್ಜಿದಾರರ ವಾದದ ಹೊರತಾಗಿಯೂ, 'ಹೆಚ್ಚಿನ ಸಂಖ್ಯೆಯ ದಾಖಲೆಗಳು ಇರುವುದು ನಿಜವಾಗಿಯೂ ನಾಗರಿಕನನ್ನು ಮತದಾರರ ಪಟ್ಟಿಗೆ ಒಳಗೊಳ್ಳಿಸುವ ಕ್ರಮ ಎಂದು ತೋರುತ್ತದೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ಈ ಹಿಂದೆ ಕರಡು ಪರಿಷ್ಕರಣೆಯಲ್ಲಿ ದಾಖಲೆಗಳ ಸಂಖ್ಯೆ 7 ಇದ್ದು, ಈಗ ಎಸ್‌ಐಆರ್‌ನಲ್ಲಿ 11 ದಾಖಲೆಗಳಿವೆ. ಇದು ಮತದಾರರ ಸ್ನೇಹಿ ಎಂದು ತೋರುತ್ತದೆ. ಆಧಾರ್ ಅನ್ನು ದಾಖಲೆಯಾಗಿ ಪರಿಗಣಿಸದೇ ಇರುವ ನಿರ್ಧಾರ ಮತದಾರರ ಪಟ್ಟಿಯಿಂದ ಹೊರಗಿಡುವ ತಂತ್ರ ಎನ್ನುವುದು ನಮಗೆ ಅರ್ಥವಾಗುತ್ತದೆ, ಆದರೆ ಹೆಚ್ಚಿನ ಸಂಖ್ಯೆಯ ದಾಖಲೆಗಳು ಇರುವುದು ನಿಜವಾಗಿಯೂ ಒಳಗೊಳ್ಳಿಸುವ ಕ್ರಮ' ಎಂದು ನ್ಯಾಯ ಪೀಠ ಹೇಳಿತು.
ಮತದಾರರು ಈ 11 ದಾಖಲೆಗಳ ಪೈಕಿ ಯಾವುದಾದರೊಂದು ತೋರಿಸಿದರೆ ಸಾಕು ಎನ್ನುವುದನ್ನೂ ಕೋರ್ಟ್ ಇದೇ ವೇಳೆ ಗಮನಿಸಿತು.
ದಾಖಲೆಗಳ ಪಟ್ಟಿ ದೊಡ್ದದಿರಬಹುದು ಆದರೆ ಅವುಗಳ ವ್ಯಾಪ್ತಿ ಕಡಿಮೆ ಎಂದು ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು.
ಇದಕ್ಕೆ ಪಾಸ್‌ಪೋರ್ಟ್ ಅನ್ನು ಉದಾಹರಣೆಯನ್ನಾಗಿ ನೀಡಿದ ಅವರು, ಬಿಹಾರದಲ್ಲಿ ಕೇವಲ ಶೇ 1-2ರಷ್ಟು ಜನರಲ್ಲಿ ಮಾತ್ರ ಪಾಸ್‌ಪೋರ್ಟ್ ಇದೆ. ಆದರೆ ಅವರಿಗೆ ರಾಜ್ಯದಲ್ಲಿ ಶಾಶ್ವತ ನಿವಾಸಿ ಪ್ರಮಾಣಪತ್ರಗಳು ನೀಡುವ ಯಾವುದೇ ಅವಕಾಶವಿಲ್ಲ ಎಂದು ಹೇಳಿದರು.
ಬಿಹಾರದ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಸಲ್ಲಿಸಬಹುದಾದ ದಾಖಲೆಗಳ ವ್ಯಾಪ್ತಿ ಸಣ್ಣದು ಎಂದು ಸಿಂಘ್ವಿ ಅರುಹಿದರು.
ರಾಜ್ಯದಲ್ಲಿ 36 ಲಕ್ಷ ಮಂದಿಗೆ ಪಾಸ್‌ಪೋರ್ಟ್ ಇದ್ದು, ಇದು ದೊಡ್ಡ ಸಂಖ್ಯೆಯೇ ಎಂದು ಪೀಠ ಅಭಿಪ್ರಾಯಪಟ್ಟಿತು.
'ಸರ್ಕಾರದ ವಿವಿಧ ಇಲಾಖೆಗಳಿಂದ ಪ್ರತಿಕ್ರಿಯೆ ಪಡೆದುಕೊಂಡೇ ದಾಖಲೆಗಳ ಪಟ್ಟಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಇದರ ವ್ಯಾಪ್ತಿ ದೊಡ್ಡದಾಗಿಯೇ ಇರುತ್ತದೆ' ಎಂದು ನ್ಯಾ. ಬಾಗ್ಚಿ ಹೇಳಿದರು.
ಮತದಾರರ ಪಟ್ಟಿಯಿಂದ ನಾಗರಿಕರು ಅಥವಾ ನಾಗರಿಕರಲ್ಲದವರನ್ನು ಸೇರಿಸುವುದು ಮತ್ತು ಹೊರಗಿಡುವುದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ. ಬಿಹಾರದಲ್ಲಿ ಮತದಾರರ ಪಟ್ಟಿಯ ಎಸ್‌ಐಆರ್‌ನಲ್ಲಿ ಆಧಾರ್ ಮತ್ತು ಮತದಾರರ ಚೀಟಿಗಳನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಸ್ವೀಕರಿಸುವುದಿಲ್ಲ ಎನ್ನುವ ಚುನಾವಣಾ ಆಯೋಗದ ನಿರ್ಧಾರವನ್ನು ಆಗಸ್ಟ್ 12ರಂದು ಸುಪ್ರೀಂ ಕೋರ್ಟ್ ಬೆಂಬಲಿಸಿತ್ತು.
ಎಸ್‌ಐಆರ್ ಬಗ್ಗೆ ಸಂಸತ್ತಿನ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಪ್ರತಿಭಟನೆಯು ನಂಬಿಕೆಯ ಕೊರತೆಯ ಸಮಸ್ಯೆ ಎಂದು ಹೇಳಿದ ಸುಪ್ರೀಂ ಕೋರ್ಟ್, ಬಿಹಾರ ಒಟ್ಟು 7.9 ಕೋಟಿ ಮತದಾರರ ಜನಸಂಖ್ಯೆಯಲ್ಲಿ ಸುಮಾರು 6.5 ಕೋಟಿ ಜನರು ತಮ್ಮ ಪರವಾಗಿಯೋ ಅಥವಾ 2003ರ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ತಮ್ಮ ಪೋಷಕರ ಪರವಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎನ್ನುವುದನ್ನು ಸುಪ್ರೀಂ ಕೋರ್ಟ್ ಇದೇ ವೇಳೆ ಗಮನಿಸಿತು.




