ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವ್ಯಾಸಂಗ ಕುರಿತ ಮಾಹಿತಿಯನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನಿರ್ದೇಶನ ನೀಡಿದ್ದನ್ನು ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ (ಡಿಯು) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ದೆಹಲಿ ಹೈಕೋರ್ಟ್ ಬುಧವಾರ ಕಾಯ್ದಿರಿಸಿತು.
ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಬುಧವಾರ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟಿಸಬೇಕಿತ್ತು. ಆದರೆ, ಅವರು ಕಲಾಪ ನಡೆಸಲಿಲ್ಲ. ಆಗಸ್ಟ್ 25ರಂದು ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ.
ವಿಚಾರಣೆ ವೇಳೆ, ದೆಹಲಿ ವಿಶ್ವವಿದ್ಯಾಲಯ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ,'ಮಾಹಿತಿ ತಿಳಿದುಕೊಳ್ಳುವ ಹಕ್ಕಿಗಿಂತ ಖಾಸಗಿತನ ಹಕ್ಕು ಮಿಗಿಲಾದದ್ದು. ಹೀಗಾಗಿ, ಸಿಐಸಿ ಆದೇಶವು ರದ್ದುಗೊಳಿಸಲು ಯೋಗ್ಯವಾಗಿದೆ' ಎಂದರು.
'ಮೋದಿ ಅವರ ಪದವಿ ವ್ಯಾಸಂಗಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನ್ಯಾಯಾಲಯಕ್ಕೆ ತೋರಿಸಲು ದೆಹಲಿ ವಿಶ್ವವಿದ್ಯಾಲಯ ಸಿದ್ಧವಿದೆ. ಅದೇ, ಆರ್‌ಟಿಐ ಅಡಿ ಅರ್ಜಿ ಸಲ್ಲಿಸುವ ಅಪರಿಚಿತರು ಈ ದಾಖಲೆಗಳನ್ನು ಪರಿಶೀಲನೆ ನಡೆಸುವುದಕ್ಕಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ' ಎಂದೂ ಹೇಳಿದರು.
ಮೋದಿ ಅವರ ಪದವಿ ವ್ಯಾಸಂಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಕೋರಿ ನೀರಜ್ ಎಂಬುವವರು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡಿ ಸಿಐಸಿ 2016ರ ಡಿಸೆಂಬರ್ 21ರಂದು ಆದೇಶಿಸಿತ್ತು.
ಸಿಐಸಿ ಆದೇಶ ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. ಸಿಐಸಿ ಆದೇಶಕ್ಕೆ ತಡೆ ನೀಡಿ ಹೈಕೋರ್ಟ್ 2017ರ ಜನವರಿ 23ರಂದು ಆದೇಶಿಸಿತ್ತು.




