ತಿರುವನಂತಪುರಂ: ಕೇರಳ ಸರ್ಕಾರವು ರಾಜ್ಯದ ನಗರ ಮತ್ತು ಗ್ರಾಮೀಣ ಭಾಗದ ಉದ್ಯೋಗ ಖಾತ್ರಿ ನೌಕರರಿಗೆ ಓಣಂ ಪ್ರಯುಕ್ತ ವಿಶೇಷ ಸೌಲಭ್ಯ ಒದಗಿಸಿದೆ.
'ಓಣಂ ಪ್ರಯುಕ್ತ ರಾಜ್ಯದಲ್ಲಿರುವ ಉದ್ಯೋಗ ಖಾತ್ರಿ ನೌಕರರಿಗೆ ತಲಾ ₹ 1,200 ಮೊತ್ತವನ್ನು ಪಾವತಿಸಲಾಗುವುದು. ಕಳೆದ ಬಾರಿ ಪ್ರತಿಯೊಬ್ಬರಿಗೂ ₹ 1,000 ಕೊಡಲಾಗಿತ್ತು.
ಈ ಬಾರಿ ₹ 200 ಜಾಸ್ತಿ ನೀಡಲಾಗುತ್ತಿದೆ. ಇದರಿಂದ ಸುಮಾರು 5,26,000 ಕಾರ್ಮಿಕರಿಗೆ ಸಹಾಯವಾಗಲಿದೆ' ಎಂದು ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 100ಕ್ಕೂ ಅಧಿಕ ದಿನ ಕಾರ್ಯನಿರ್ವಹಿಸಿರುವ 5,19,000 ಕಾರ್ಮಿಕರಿಗಾಗಿ ₹ 51.96 ಕೋಟಿ ಹಾಗೂ ಅಯ್ಯಂಕಳಿ ನಗರ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿರುವ 6,368 ಕಾರ್ಮಿಕರಿಗಾಗಿ ₹ 63.68 ಲಕ್ಷ ಹಣವನ್ನು ಮೀಸಲಿಡಲಾಗಿದೆ. ಅವರ ದಿನಗೂಲಿಯನ್ನು ಹೊರತುಪಡಿಸಿ, ಈ ಮೊತ್ತವನ್ನು ಹಬ್ಬದ ಪ್ರಯುಕ್ತ ಅವರಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.




