: ಶಬರಿಮಲೆಯ ಶ್ರೀ ಅಯ್ಯಪ್ಪ ಸನ್ನಿಧಾನದಲ್ಲಿ ಸಿಂಹ ಮಾಸದ ಪೂಜೆಗಾಘಿ ಶನಿವಾರ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಬಿರುಸಿನ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಮಂದಿ ಭಕ್ತಾದಿಗಳು ಬೆಟ್ಟವೇರಿ ಶಬರಿಮಲೆ ಸನ್ನಿದಾನ ತಲುಪಿದ್ದರು.
ತಂತ್ರಿ ಕಂಠಾರ್ ಮಹೇಶ್ ಮೋಹನರ್ ಅವರ ದಿವ್ಯ ಉಪಸ್ಥಿತಿಯಲ್ಲಿ ಮುಖ್ಯ ಅರ್ಚಕ ಅರುಣ್ ಕುಮಾರ್ ನಂಬೂದಿರಿ ಗರ್ಭಗುಡಿ ಬಾಗಿಲು ತೆರೆದು ದೀಪ ಬೆಳಗಿಸಿದರು. ನಂತರ ಮಾಲಿಗಪುರತ್ತಮ್ಮ ಗುಡಿಯ ಬಾಗಿಲು ತೆರೆಯಲು ಬೀಗದ ಗೊಂಚಲು ಹಾಗೂ ಭಸ್ಮವನ್ನು ಮಾಲಿಗಪುರತ್ತಮ್ಮ ಕ್ಷೇತ್ರದ ಮುಖ್ಯ ಅರ್ಚಕ ವಾಸುದೇವನ್ ನಂಬೂರಿಸಿ ಅವರಿಗೆ ಹಸ್ತಾಂತರಿಸಿದರು. ನಂತರ ಹದಿನೆಂಟು ಮೆಟ್ಟಿಲ ಬಳಿ ದೀಪ ಉರಿಸಿ ಪೂಜೆ ಸಲ್ಲಿಸಿದ ನಂತರ ಭಕ್ತಾದಿಗಳಿಗೆ ಹದಿನೆಂಟು ಮೆಟ್ಟಿಲೇರಲು ಅವಕಾಶ ನೀಡಲಾಯಿತು. ಸಿಂಹ ಮಾಸದ ಒಂದನೇ ದಿನ(ಆ. 17)ದಂದು ಶ್ರೀ ಅಯ್ಯಪ್ಪ ಸನ್ನಿಧಿಯಲ್ಲಿ ಲಕ್ಷಾರ್ಚನೆ ನಡೆಯಲಿರುವುದು.
ಆ. 18ರಂದು ಬೆಳಗ್ಗೆ ತುಪ್ಪಾಭಿಷೇಕ ಆರಂಭಗೊಳ್ಳಲಿದ್ದು, ಆ. 21ರ ವರೆಗೆ ದೇಗುಲ ಭಕ್ತಾದಿಗಳಿಗಾಗಿ ತೆರೆದುಕೊಂಡಿರಲಿದೆ. ದರ್ಶನಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳೂ ವರ್ಚುವಲ್ ಕ್ಯೂ ಬುಕ್ ಮಾಡಿಕೊಳ್ಳಬೇಕಾಗಿದೆ.
ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಂಪೆ ಸೇರಿದಂತೆ ವಿವಿಧ ಹೊಳೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಪಂಪಾ ಸ್ನಾನಕ್ಕಾಗಿ ಭಕ್ತಾದಿಗಳು ಹೊಳೆಗೆ ಇಳಿಯದಿರುವಂತೆ ಪತ್ತನಂತಿಟ್ಟ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆ. 21ರಂದು ರಾತ್ರಿ 10ಕ್ಕೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ಓಣಂ ಉತ್ಸವಕ್ಕಾಗಿ ಸೆ. 3ರಂದು ಸಂಜೆ 5ಕ್ಕೆ ಗರ್ಭಗುಡಿ ಬಾಗಿಲು ಮತ್ತೆ ತೆರೆಯಲಾಗುವುದು.




