ಅರರಿಯಾ: ಚುನಾವಣಾ ಹೊಸ್ತಿಲಲ್ಲಿರುವ ಬಿಹಾರದಲ್ಲಿ 'ಇಂಡಿಯಾ' ಮೈತ್ರಿಕೂಟದ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ವಿಧಾನಸಭಾ ಚುನಾವಣಾ ಫಲಿತಾಂಶ ಧನಾತ್ಮಕವಾಗಿ ಮೂಡಿಬರಲಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಭಾನುವಾರ) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರರಿಯಾದಲ್ಲಿ 'ವೋಟರ್ ಅಧಿಕಾರ ಯಾತ್ರೆ'ಯಲ್ಲಿ ಭಾಗವಹಿಸಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಗೆ ಶೀಘ್ರದಲ್ಲೇ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು' ಎಂದಿದ್ದಾರೆ.
'ಬಿಹಾರ ವಿಧಾನಸಭೆ ಚುನಾವಣೆಗೆ 'ಇಂಡಿಯಾ' ಮೈತ್ರಿಕೂಟ ಶೀಘ್ರದಲ್ಲೇ ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ವಿರೋಧ ಪಕ್ಷದ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ. ಫಲಿತಾಂಶವು ಧನಾತ್ಮಕವಾಗಲಿದೆ' ಎಂದು ಹೇಳಿದ್ದಾರೆ.
ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, 'ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಮೂಲಕ ಬಿಜೆಪಿಗಾಗಿ ಮತ ದೋಚಲು ಚುನಾವಣಾ ಆಯೋಗದಿಂದ ಯತ್ನ ನಡೆಯುತ್ತಿದೆ' ಎಂದು ಆರೋಪಿಸಿದ್ದಾರೆ.
'ಬಿಹಾರದಲ್ಲಿ ಮತ ಕದಿಯಲು ಚುನಾವಣಾ ಆಯೋಗವನ್ನು ಬಿಡುವುದಿಲ್ಲ. ಆಯೋಗವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ' ಎಂದು ಅವರು ಟೀಕಿಸಿದ್ದಾರೆ.




