HEALTH TIPS

ಆಧಾರ್ ಪೌರತ್ವದ ದಾಖಲೆ ಅಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಪೌರತ್ವವನ್ನು ದೃಢೀಕರಿಸಲು ಆಧಾರ್‌ ಕಾರ್ಡ್‌ ಅನ್ನು ನಿರ್ಣಾಯಕ ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ಚುನಾವಣಾ ಆಯೋಗದ ನಿಲುವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಒಪ್ಪಿಕೊಂಡಿದೆ.

ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಮಹತ್ವದ ನಿಲುವು ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರು ಅರ್ಜಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಪತ್ರ (ಎಪಿಕ್) ಮತ್ತು ಪಡಿತರ ಚೀಟಿಗಳನ್ನು ಪೌರತ್ವ ದೃಢೀಕರಿಸಲು ನಿರ್ಣಾಯಕ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗವು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಇದನ್ನು ಒಪ್ಪಿಕೊಂಡ ಪೀಠ, 'ಈ ದಾಖಲೆಗಳಿಗೆ ಬೆಂಬಲವಾಗಿ ಇತರೆ ದಾಖಲೆಗಳನ್ನೂ ನೀಡಬೇಕು' ಎಂದು ಹೇಳಿತು.

'ಆಧಾರ್‌ ಅನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗವು ಹೇಳುವುದು ಸರಿಯಾಗಿಯೇ ಇದೆ. ಆಧಾರ್‌ ಅನ್ನೂ ಪರಿಶೀಲನೆಗೆ ಒಳಪಡಿಸಬೇಕು. ಆಧಾರ್ ಕಾಯ್ದೆಯ ಸೆಕ್ಷನ್ 9 ನಿರ್ದಿಷ್ಟವಾಗಿ ಅದನ್ನೇ ಹೇಳುತ್ತದೆ' ಎಂದು ಪೀಠವು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರಿಗೆ ತಿಳಿಸಿತು.

ಆಧಾರ್‌ ಕಾರ್ಡ್‌, ಎಪಿಕ್ ಮತ್ತು ಪಡಿತರ ಚೀಟಿಗಳನ್ನು ಹೊಂದಿದ್ದರೂ ಬಿಹಾರದಲ್ಲಿ ಅಧಿಕಾರಿಗಳು ಅವುಗಳನ್ನು ದಾಖಲೆಯಾಗಿ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಅರ್ಜಿದಾರರಲ್ಲಿ ಒಬ್ಬರಾದ ಆರ್‌ಜೆಡಿ ನಾಯಕ ಮನೋಜ್‌ ಝಾ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ವಿಚಾರಣೆ ವೇಳೆ ವಾದಿಸಿದರು.

'ಒಬ್ಬನ ಬಳಿ ಯಾವುದೇ ದಾಖಲೆಗಳಿಲ್ಲ. ಆದರೆ, ಬಿಹಾರದಲ್ಲಿ ನೆಲಸಿದ್ದಾನೆ ಎಂಬ ಕಾರಣ ಆತನನ್ನು ಆ ರಾಜ್ಯದ ಮತದಾರನೆಂದು ಪರಿಗಣಿಸಬೇಕು ಎಂಬುದು ನಿಮ್ಮ ವಾದವೇ? ನಿಮ್ಮ ವಾದವನ್ನು ಒಪ್ಪಬಹುದು. ಆದರೆ, ಅದಕ್ಕಾಗಿ ಅವರು ಕೆಲವು ದಾಖಲೆಗಳನ್ನು ಒದಗಿಸಬೇಕು' ಎಂದು ಪೀಠ ಸ್ಪಷ್ಟಪಡಿಸಿತು.

ಜನನ ಪ್ರಮಾಣಪತ್ರ ಮತ್ತು ಪೋಷಕರ ಇತರ ದಾಖಲೆಗಳನ್ನು ಹುಡುಕಲು ಜನರು ಹೆಣಗಾಡುತ್ತಿದ್ದಾರೆ ಎಂದು ಸಿಬಲ್ ಹೇಳಿದಾಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್, 'ಬಿಹಾರದಲ್ಲಿ ಯಾರ ಬಳಿಯೂ ದಾಖಲೆಗಳಿಲ್ಲ ಎಂಬುದು ಆಧಾರವಿಲ್ಲದ ಹೇಳಿಕೆಯಾಗಿದೆ. ನೀವು ಹೇಳಿದಂತೆ ಬಿಹಾರದಲ್ಲಿ ಜನರು ದಾಖಲೆಗಳನ್ನು ಹುಡುಕಲು ಪರದಾಡುತ್ತಿದ್ದಾರೆ ಎಂದಾದರೆ, ದೇಶದ ಇತರ ಭಾಗಗಳಲ್ಲಿ ಪರಿಸ್ಥಿತಿ ಏನಿರಬಹುದು' ಎಂದು ಪ್ರಶ್ನಿಸಿದರು.

ಆರ್‌ಜೆಡಿಯ ಮನೋಜ್‌ ಝಾ ಅಲ್ಲದೆ ಮಹುವಾ ಮೊಯಿತ್ರಾ (ಟಿಎಂಸಿ), ಕೆ.ಸಿ.ವೇಣುಗೋಪಾಲ್ (ಕಾಂಗ್ರೆಸ್), ಸುಪ್ರಿಯಾ ಸುಳೆ (ಎನ್‌ಸಿಪಿ ಶರದ್‌ ಪವಾರ್‌ ಬಣ) ಮತ್ತು ಡಿ.ರಾಜಾ (ಸಿಪಿಐ) ಸೇರಿದಂತೆ ಹಲವರು ಎಸ್‌ಐಆರ್‌ ವಿರುದ್ಧ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಬುಧವಾರವೂ ಮುಂದುವರಿಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries