HEALTH TIPS

ಕಡಲಿಗಿಳಿಯಲು ಸಜ್ಜಾದ ಸ್ವದೇಶಿ ಯುದ್ಧ ನೌಕೆ ಉದಯಗಿರಿ, ಹಿಮಗಿರಿ ವಿಶೇಷಗಳಿವು...

ವಿಶಾಖಪಟ್ಟಣ: ಭಾರತೀಯ ನೌಕಾಪಡೆಯು ಅಭಿವೃದ್ಧಿಪಡಿಸಿರುವ ಎರಡು ಅತ್ಯಾಧುನಿಕ ಯುದ್ಧನೌಕೆಗಳಾದ ಉದಯಗಿರಿ (F35) ಹಾಗೂ ಹಿಮಗಿರಿ (F34) ಸೇನೆ ಸೇರಲು ಸಿದ್ಧವಾಗಿದ್ದು, ಆ. 26ರಿಂದ ಕಡಲಿಗಿಳಿಯಲಿವೆ. ಸ್ವದೇಶಿ ನಿರ್ಮಾಣದ ಈ ಹಡಗುಗಳು ಹಲವು ವೈಶಿಷ್ಟ್ಯಗಳನ್ನು ಹೊಂದಿವೆ.

ಉದಯಗಿರಿಯನ್ನು ಮುಂಬೈನಲ್ಲಿರುವ ಮಡಗಾಂವ್‌ ಡಾಕ್‌ ಹಡಗು ನಿರ್ಮಾಣ ಸಂಸ್ಥೆ (MDL) ಅಭಿವೃದ್ಧಿಪಡಿಸಿದ್ದು, ಈ ಪ್ರಾಜೆಕ್ಟ್‌ 17ಎ ರಹಸ್ಯ ಕಾರ್ಯಾಚರಣೆ ಸಾಮರ್ಥ್ಯದ ಯುದ್ಧನೌಕೆಯು ಇದರ ಎರಡನೇ ಯೋಜನೆಯಾಗಿದೆ.

ಹಿಮಗಿರಿ ಯುದ್ಧನೌಕೆಯನ್ನು ಕೋಲ್ಕತ್ತದಲ್ಲಿರುವ ಗಾರ್ಡನ್ ರೀಚ್ ಹಡಗು ನಿರ್ಮಾಣ ಮತ್ತು ಎಂಜಿನಿಯರ್ಸ್‌ ಸಂಸ್ಥೆ (GRSE) ನಿರ್ಮಿಸಿದೆ. ಈ ಪಿ17ಎ ಯೋಜನೆಯು ಇದರ ಮೊದಲ ಪ್ರಯತ್ನವಾಗಿದೆ.

ಇದೇ ಮೊದಲ ಬಾರಿಗೆ ಎರಡು ಪ್ರತ್ಯೇಕ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಎರಡು ಯುದ್ಧನೌಕೆಗಳು ವಿಶಾಖಪಟ್ಟಣದಲ್ಲಿ ಏಕಕಾಲಕ್ಕೆ ನೌಕಾಪಡೆಯನ್ನು ಸೇರುತ್ತಿವೆ.

ಉದಯಗಿರಿ, ಹಿಮಗಿರಿ ಯುದ್ಧನೌಕೆಗಳ ಸಾಮರ್ಥ್ಯವೇನು..?

ಹಾಲಿ ಇರುವ ಶಿವಾಲಿಕ್‌ ಶ್ರೇಣಿಯ ಯುದ್ಧನೌಕೆಗೆ ಹೋಲಿಸಿದರೆ ಹಿಮಗಿರಿಯು ಶೇ 5ರಷ್ಟು ದೊಡ್ಡದು. ಇದು 6,700 ಟನ್‌ ತೂಕವಿದೆ. ರಾಡಾರ್‌ಗಳಿಗೆ ಗೋಚರಿಸದಂತೆ ಶತ್ರುಗಳಿಂದ ತನ್ನನ್ನು ರಕ್ಷಿಸಿಕೊಂಡು, ದಾಳಿ ನಡೆಸುವ ಸಾಮರ್ಥ್ಯ ಇದರದ್ದು ಎಂದು ನೌಕಾದಳದ ಪ್ರಕಟಣೆ ತಿಳಿಸಿದೆ.

ಡೀಸೆಲ್‌ ಅಥವಾ ಅನಿಲ (CODOG) ಎರಡನ್ನೂ ಬಳಸುವ ಪ್ರೊಪೆಲರ್‌ ಇದರದ್ದು. ಇದನ್ನು ಸಂಯೋಜಿತ ವೇದಿಕೆ ನಿರ್ವಹಣಾ ವ್ಯವಸ್ಥೆ ಮೂಲಕ ನಿರ್ವಹಿಸಲಾಗುತ್ತದೆ.

ಸೂಪರ್‌ಸಾನಿಕ್ ಖಂಡಾಂತರ ಕ್ಷಿಪಣಿ, ಮಧ್ಯಮ ಶ್ರೇಣಿಯ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ, 76 ಮಿ.ಮೀ. ಎಂಆರ್‌ ಬಂದೂಕು ಹಾಗೂ 30 ಮಿ.ಮೀ. ಹಾಗೂ 12.7 ಮಿ.ಮೀ. ಬಂದೂಕುಗಳನ್ನೂ ಅಳವಡಿಸಲಾಗಿದೆ. ಜತೆಗೆ, ಜಲಾಂತರ್ಗಾಮಿ ನಿರೋಧಕ ಹಾಗೂ ನೀರಿನೊಳಗೆ ಬಳಸುವ ಯಾವುದೇ ಶಸ್ತ್ರಾಸ್ತ್ರಗಳಿಂದ ರಕ್ಷಿಸಿಕೊಳ್ಳಬಲ್ಲ ಸಾಮರ್ಥ್ಯ ಇದರದ್ದಾಗಿದೆ.

ಕಡಲಿನಲ್ಲಿ ಈಗಾಗಲೇ ಕಠಿಣ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಯಂತ್ರೋಪಕರಣಗಳು, ಅಗ್ನಿಶಾಮಕ ವ್ಯವಸ್ಥೆ, ಹಾನಿ ನಿಯಂತ್ರಣ, ನೌಕಾ ನಿರ್ವಹಣೆ ಮತ್ತು ಸಂಪರ್ಕ ವ್ಯವಸ್ಥೆಗಳ ಕಾರ್ಯಕ್ಷಮತೆಯ ಪರೀಕ್ಷೆ ನಡೆದಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಸ್ವದೇಶಿ ನಿರ್ಮಿತ ಭಾರತದ ಹಡಗುಗಳ ಯಾವುವು?

ಹಡಗು ನಿರ್ಮಾಣದಲ್ಲಿ ಸ್ವಾವಲಂಬನೆ ಸಾಧಿಸುವ ನೌಕಾಪಡೆಯ ಪ್ರಯತ್ನದ ಫಲವಾಗಿ ಸ್ವದೇಶಿ ನಿರ್ಮಿತ ಉದಯಗಿರಿ ಹಾಗೂ ಹಿಮಗಿರಿ ಯುದ್ಧ ನೌಕೆಗಳು ಸಿದ್ಧಗೊಂಡಿವೆ ಎಂದು ನೌಕಾಪಡೆ ತಿಳಿಸಿದೆ.

ಶತ್ರು ನೌಕೆಗಳನ್ನು ನಾಶಪಡಿಸಬಲ್ಲ ಐಎನ್‌ಎಸ್‌ ಸೂರತ್, ಯುದ್ಧನೌಕೆ ಐಎನ್‌ಎಸ್‌ ನೀಲಗಿರಿ, ಜಲಾಂತರ್ಗಾಮಿ ಐಎನ್‌ಎಸ್‌ ವಾಘಶೀರ್‌, ಆಳವಿಲ್ಲದ ನೀರಿನಲ್ಲೂ ಕಾರ್ಯಾಚರಣೆ ನಡೆಸಬಲ್ಲ ಐಎನ್‌ಎಸ್ ಅರ್ನಾಲ, ಡೈವಿಂಗ್‌ಗೆ ನೆರವಾಗಬಲ್ಲ ಐಎನ್‌ಎಸ್‌ ನಿಸ್ತಾರ್‌ಗಳು ಸ್ವದೇಶಿ ನಿರ್ಮಿತವಾಗಿದ್ದು, ಇವೆಲ್ಲವೂ 2025ರಲ್ಲಿ ನೌಕಾಪಡೆ ಸೇರಿವೆ.

ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಸಂಸ್ಥೆಯಿಂದ ವಿನ್ಯಾಸಗೊಂಡ 100ನೇ ಹಡಗು ಉದಯಗಿರಿಯಾಗಿದೆ ಎಂಬುದು ಮತ್ತೊಂದು ವಿಶೇಷ.

ಎರಡೂ ಹಡುಗುಗಳ ನಿರ್ಮಾಣ 200 ಮಧ್ಯಮ ಗಾತ್ರದ ಕಾರ್ಖಾನೆಗಳಿಗೆ ಸಮವಾಗಿದೆ. 4 ಸಾವಿರ ನೇರ ಉದ್ಯೋಗ ನೀಡಿದೆ. ಜತೆಗೆ ಪರೋಕ್ಷವಾಗಿ 10 ಸಾವಿರ ಜನರಿಗೆ ಇವು ಉದ್ಯೋಗ ಕಲ್ಪಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries