ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಭಾರತ ಸಶಸ್ತ್ರ ಪಡೆಗಳು ದಿಟ್ಟ ಉತ್ತರ ನೀಡಿತ್ತು. ಇಂದು (ಮಂಗಳವಾರ) ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಅವರನ್ನು ಸನ್ಮಾನಿಸಲಾಯಿತು.
ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಮಹಾದೇವ್ ಸಮಯದಲ್ಲಿ ಮೋದಿಯವರ ನಾಯಕತ್ವ ಮತ್ತು ಸಶಸ್ತ್ರ ಪಡೆಗಳ ಅಸಾಧಾರಣ ಧೈರ್ಯ ಮತ್ತು ಅಚಲ ಬದ್ಧತೆಯನ್ನು ಶ್ಲಾಘಿಸುವ ನಿರ್ಣಯವನ್ನು ಸಂಸದೀಯ ಪಕ್ಷದ ಸಭೆಯಲ್ಲಿ ಅಂಗೀಕರಿಸಲಾಯಿತು.
ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ದಿನವು (ಆಗಸ್ಟ್ 5) ಐತಿಹಾಸಿಕ ದಿನವಾಗಿತ್ತು ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಸಂವಿಧಾನದ ತತ್ವಗಳನ್ನು ನಿಜವಾದ ಅರ್ಥದಲ್ಲಿ ಅನುಸರಿಸಿದೆ. ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದ ಮೋದಿ, ಸಚಿವಾಲಯದಲ್ಲಿ ಅತಿಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಆಪರೇಷನ್ ಸಿಂಧೂರ ಬಗ್ಗೆ ಚರ್ಚೆಗೆ ಪ್ರಯತ್ನಿಸುವ ಮೂಲಕ ತಪ್ಪು ಮಾಡಿದ್ದೇವೆಯೇ? ಎಂದು ಯೋಚಿಸುತ್ತಿದೆ ಅವರು ತಿಳಿಸಿದ್ದಾರೆ.
ಜುಲೈ 28ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ 'ಆಪರೇಷನ್ ಮಹಾದೇವ್' ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತಯಬಾದ (ಎಲ್‌ಇಟಿ) ಮೂವರು ಮೋಸ್ಟ್ ವಾಂಟೆಡ್ ಉಗ್ರರನ್ನು ಹತ್ಯೆ ಮಾಡಲಾಯಿತು ಎಂದು ಹೇಳಿದ್ದಾರೆ.




