ಟೆಹ್ರಾನ್: ಇಸ್ರೇಲ್ ಮೇಲೆ ಯಾವಾಗ ಬೇಕಾದರೂ ಯುದ್ಧ ಆರಂಭವಾಗಬಹುದು ಎಂದಿದ್ದ ಇರಾನ್‌ನಿಂದ ನೌಕಾಪಡೆಗಳ ಸಮರಾಭ್ಯಾಸ ಆರಂಭವಾಗಿದೆ. ಗಲ್ಫ್ ಆಫ್ ಓಮನ್ ಮತ್ತು ಹಿಂದೂ ಮಹಾಸಾಗರದಲ್ಲಿ "ಸುಸ್ಥಿರ ಶಕ್ತಿ 1404' ಎಂಬ ಹೆಸರಿನಲ್ಲಿ ಸಮರಾಭ್ಯಾಸವನ್ನು ಆರಂಭಿಸಿದ್ದು, 18000ಕ್ಕೂ ಹೆಚ್ಚು ಸೈನಿಕರು ಭಾಗಿಯಾಗಿದ್ದಾರೆ.
ಅಲ್ಲದೆ, ಪರೀಕ್ಷಾರ್ಥವಾಗಿ ಹಡಗುಗಳಲ್ಲಿ ಕ್ರೂಸ್ ಕ್ಷಿಪಣಿಗಳನ್ನು ಅಳವಡಿಸಿ ಶಕ್ತಿ ಪ್ರದರ್ಶನವನ್ನೂ ಮಾಡಲಾಗಿದೆ.
ಈ ಬಗ್ಗೆ ಇರಾನ್‌ನ ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಜೀಜ್ ನಸೀರ್ ಜಾಡೆಹ್ ಪ್ರತಿಕ್ರಿಯಿಸಿದ್ದು, ನಮ್ಮ ಸೇನೆಯು ನೂತನ ಕ್ಷಿಪಣಿಗಳನ್ನು ಹೊಂದಿದೆ. ಭವಿಷ್ಯದಲ್ಲಿ ಯಾವುದೇ ಸಂಭಾವ್ಯ ಶತ್ರುದಾಳಿಗೆ ಪ್ರತಿಯಾಗಿ ನಮ್ಮ ಈ ಕ್ಷಿಪಣಿಗಳನ್ನು ಪ್ರಯೋಗಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಪರಮಾಣು ಒಪ್ಪಂದದ ಭಾಗವಾಗಿರುವ ಯುರೋಪಿಯನ್ ದೇಶಗಳು ಇರಾನ್‌ನ ಈ ಕ್ರಮವನ್ನು ಖಂಡಿಸಿದ್ದು, ಐಎಇಎ ಜತೆ ಆ.31ರೊಳಗೆ ತೃಪ್ತಿದಾಯಕ ಪರಿಹಾರ ಕಂಡುಕೊಳ್ಳದಿದ್ದರೆ, ವಿಶ್ವಸೆಂಸ್ಥೆಯಿಂದ ಈ ಮೊದಲು ತೆಗೆದುಹಾಕಿದ್ದ ಎಲ್ಲ ನಿರ್ಬಂಧಗಳನ್ನು ಮತ್ತೆ ಹೇರುವುದಾಗಿ ಎಂದು ಎಚ್ಚರಿಕೆ ನೀಡಿವೆ.




