HEALTH TIPS

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದೆವು, ಆದರೆ...: ಮಮತಾ ಬ್ಯಾನರ್ಜಿ ಹೇಳಿದ್ದೇನು?

ಕೋಲ್ಕತ್ತ: ದೇಶವು ಹತ್ತಿರಹತ್ತಿರ 8 ದಶಕಗಳ ಹಿಂದೆ ಬ್ರಿಟಿಷರಿಂದಲೇನೋ ಸ್ವಾತಂತ್ರ್ಯ ಪಡೆಯಿತು. ಆದರೆ, ಬಿಜೆಪಿ ಆಡಳಿತದಲ್ಲಿ ಇಂದು ಭಾರತ ಸ್ವತಂತ್ರವಾಗಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ.

ದೇಶದ 79ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನ (ಗುರುವಾರ) ಬೆಹಲಾ ಮತ್ತು ಹಝ್ರಾದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಮತಾ, ಕೇಸರಿ ಪಕ್ಷವು ಜನರ ಮತದಾನದ ಹಕ್ಕು, ಮಾತನಾಡುವ ಸ್ವಾತಂತ್ರ್ಯ ಹಾಗೂ ಇತರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ದೂರಿದ್ದಾರೆ.

'ಭಾರತವು 78 ವರ್ಷಗಳ ಹಿಂದೆಯೇ ಸ್ವಾತಂತ್ರ್ಯ ಸಾಧಿಸಿದ್ದರೂ, ಬಿಜೆಪಿಯ ನಿರಂಕುಶ ಪ್ರಭುತ್ವದಲ್ಲಿ ಜನರು ನಿಜವಾಗಿಯೂ ಸ್ವತಂತ್ರವಾಗಿ ಇಲ್ಲ' ಎಂದು ಟೀಕಿಸಿದ್ದಾರೆ. ಹಾಗೆಯೇ, 'ಕೋಮು ಸಾಮರಸ್ಯಕ್ಕಾಗಿ ಮತ್ತು ನಿಜವಾದ ಸ್ವಾತಂತ್ರ್ಯವನ್ನು ಗಳಿಸುವ ನಿಟ್ಟಿನಲ್ಲಿ ದೇಶದ ಸಮಗ್ರತೆಗಾಗಿ ಹೋರಾಟವನ್ನು ಮುಂದುವರಿಸಲಿದ್ದೇವೆ' ಎಂದು ಹೇಳಿದ್ದಾರೆ.

'ರಾಜ್ಯದ ಜನರು ಉದ್ಯೋಗ ಖಾತರಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರು ಇತರ ರಾಜ್ಯಗಳಲ್ಲಿ ಕಿರುಕುಳ ಅನುಭವಿಸುತ್ತಿದ್ದಾರೆ' ಎಂದು ದೂರಿರುವ ಮುಖ್ಯಮಂತ್ರಿ, 'ಬಿಜೆಪಿಯು ಚುನಾವಣಾ ಆಯೋಗವನ್ನು ತನ್ನ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ' ಎಂದು ಆರೋಪಿಸಿದ್ದಾರೆ.

'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಹೆಸರಿನಲ್ಲಿ ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಗೊಳಿಸುವುದಕ್ಕಾಗಿ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

'ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರನ್ನು ನೆರೆ ರಾಷ್ಟ್ರದ ನಾಗರಿಕರು, ಅಕ್ರಮ ವಲಸಿಗರು ಎಂಬ ಹೆಸರಿನಲ್ಲಿ ಬಾಂಗ್ಲಾದೇಶಕ್ಕೆ ದಬ್ಬುವ ಪ್ರಯತ್ನಗಳು ನಡೆಯುತ್ತಿವೆ' ಎಂದೂ ಆರೋಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries