ಕಾಸರಗೋಡು: ಓಣಂ ಹಬ್ಬಕ್ಕೆ ವಿಷರಹಿತ ತರಕಾರಿ ಪೂರೈಸಲು ಕುಟುಂಬಶ್ರೀ ಪಣತೊಟ್ಟಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ವ್ಯಾಪಕವಾಗಿ ತರಕಾರಿ ಬೆಳೆಸುವ ಯೋಜನೆ ಹಾಕಿಕೊಂಡಿದೆ. ಕುಟುಂಬಶ್ರೀ ಜಿಲ್ಲೆಯಲ್ಲಿ 42 ಸಿಡಿಎಸ್‍ಗಳನ್ನು ಹೊಂದಿದ್ದು, ಎಲ್ಲಾ ಸಿಡಿಎಸ್ ಘಟಕಗಳ ಮೂಲಕವೂ ತರಕಾರಿ ಹಾಗೂ ಹೂವಿನ ಕೃಷಿ ನಡೆಸಲು ಮುಂದಾಗಿದೆ.
'ಓಣಂ ಕಣಿ'ಯೋಜನೆಯನ್ವಯ 1006 ಎಕರೆ, 'ನಿರ ಪೊಲಿಮ'ಯೋಜನೆಯನ್ವಯ 110ಎಕರೆ ವಿಸ್ತೀರ್ಣದಲ್ಲಿ ತರಕಾರಿ ಹಾಗೂ ಹೂವಿನ ಕೃಷಿ ನಡೆಸಲಾಗುತ್ತಿದೆ. ತರಕಾರಿಗಳಲ್ಲಿ ಹೆಚ್ಚುತ್ತಿರುವ ರಾಸಾಯನಿಕ ಹಾಗೂ ವಿಷಾಂಶ ಕಡಿಮೆ ಮಾಡುವ ನಿಟ್ಟಿನಲ್ಲಿ ಕುಟುಂಬಶ್ರೀ ಸಿಡಿಎಸ್ ಮೂಲಕ ಕಳೆದ ಹಲವು ವರ್ಷಗಳಿಂದ ತರಕಾರಿ ಹಾಗೂ ಹೂವಿನ ಕೃಷಿ ನಡೆಸಲಾಗುತ್ತಿದೆ.
ಕಳೆದ ಕೆಲವು ತಿಂಗಳಿಂದ ಜಿಲ್ಲೆಯ ವಿವಿಧ ಸಿಡಿಎಸ್ ಅಧೀನದಲ್ಲಿ ಜಾಗ ಗುತ್ತಿಗೆಗೆ ಪಡೆದು, ಇದನ್ನು ಹದಬರಿಸಿ ತರಕಾರಿ ಹಾಗೂ ಹೂವಿನ ಕೃಷಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇನ್ನು ಸಿಡಿಎಸ್ ಮೂಲಕ ಬೆಳೆಸುತ್ತಿರುವ ತರಕಾರಿ ಹಾಗೂ ಹೂವಿಗೆ ಸೂಕ್ತ ಮಾರುಕಟ್ಟೆ ಒದಗಿಸಿಕೊಡಲು ಕುಟುಂಬಶ್ರೀ ಜಿಲ್ಲಾ ಮಿಷನ್ ಚಟುಟಿಕೆ ಆರಂಭಿಸಿದೆ.
ಕೃಷಿಗೆ ಅಗತ್ಯವಿರುವ ಬೀಜ ಹಾಗೂ ಸಸಿಗಳನ್ನು ಕುಟುಂಬಶ್ರೀ ನಡೆಸುತ್ತಿರುವ ನರ್ಸರಿಗಳಿಂದ, ಕೃಷಿ ಇಲಾಖೆ, ಫಾರ್ಮರ್ಸ್ ಫೆಲಿಸಿಟೇಶನ್ ಸೆಂಟರ್‍ಗಳಿಂದ ಕಡಿಮೆ ಬೆಲೆಗೆ ಕುಟುಂಬಶ್ರೀಗಳಿಗೆ ಪೂರೈಸಲಾಗಿದೆ. ಈಗಾಗಲೇ ವಿವಿಧೆಡೆ ಕುಟುಂಬಶ್ರೀ ಸಿಡಿಎಸ್‍ಗಳು ನಡೆಸಿರುವ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯನ್ನು ಕುಟುಂಬಶ್ರೀ ಕಾರ್ಯಕರ್ತರು ಇರಿಸಿಕೊಂಡಿದ್ದಾರೆ.
ಓಣ ಸಂತೆ ಮೂಲಕ ಮಾರಾಟ:
ಓಣಂ ಹಬ್ಬ ವೇಳೆ ಜಿಲ್ಲೆಯ ನಾನಾ ಕಡೆ ಓಣಂ ಸಂತೆಯನ್ನು ಕುಟುಂಬಶ್ರೀ ಮೂಲಕ ನಡೆಸಲಾಗುತ್ತಿದೆ. ಇದರಲ್ಲಿ ಉಪ್ಪನಕಾಯಿಯಿಂದ ತೊಡಗಿ ರೆಡಿಮೆಡ್ ಬಟ್ಟೆ, ಆಹಾರ ಪದಾರ್ಥ, ಹಾಳೆ ತಟ್ಟೆ, ಜೇನು ಸೇರಿದಂತೆ ಹಲವಾರು ಉತ್ಪನ್ನಗಳನ್ನು ಕುಟುಂಬಶ್ರೀ ಘಟಕಗಳ ಮೂಲಕ ತಯಾರಿಸಲಾಗುತ್ತಿದ್ದು, ಇದರ ಜತೆಗೆ ಸಿಡಿಎಸ್ ಮೂಲಕ ಬೆಳೆಸಿರುವ ತರಕಾರಿ ಹಗೂ ಹೂವು ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ. ಓಣಂ ಹಬ್ಬಕ್ಕೆ ಕುಟುಂಬಶ್ರೀ ಬೆಳೆಸುವ ತರಕಾರಿ ವ್ಯಾಪಕಗೊಳಿಸುವ ಯೋಜನೆಯನ್ನು ಕುಟುಂಬಶ್ರೀ ಸಿಡಿಎಸ್‍ಗಳು ಕಳೆದ ಹಲವು ವರ್ಷಗಳಿಂದ ನಡೆಸುತ್ತಿದ್ದರೂ, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಹಾಗೂ ಹೂವು ಬೆಳೆಸುತ್ತಿದೆ.
ಅಭಿಮತ:
ಜನತೆಗೆ ವಿಷರಹಿತ, ಗುಣಮಟ್ಟದ ತರಕಾರಿ ಹಾಗೂ ಹೂವು ಜನರಿಗೆ ಕೈಗೆಟಕುವ ದರದಲ್ಲಿ ಪೂರೈಸುವ ಕುಟುಂಬಶ್ರೀಯ ಕನಸು ನನಸಾಗುವ ಎಲ್ಲ ಸಾಧ್ಯತೆಯಿದೆ. ಇದರೊಂದಿಗೆ ಕುಟುಂಬಶ್ರೀಗೆ ಉತ್ತಮ ಆದಾಯವೂ ಲಭಿಸುವ ನಿರೀಕ್ಷೆಯಿದೆ. ಓಣಂ ಹಬ್ಬಕ್ಕೆ ಶುದ್ಧ ಹಾಗೂ ವಿಷರಹಿತ ತರಕಾರಿ ಪೂರೈಸುವುದು ಕುಟುಂಬಶ್ರೀ ಉದ್ದೇಶವಾಗಿದೆ. ಹೂವಿನ ಹಬ್ಬವಾಗಿರುವ ಓಣಂಗೆ ಚೆಂಡುಹೂವನ್ನು ಸಿಡಿಎಸ್ ಘಟಕ ದ ಮೂಲಕ ಬೆಳೆಸಲಾಗುತ್ತಿದೆ.
ರತೀಶ್ ಪಿಲಿಕ್ಕೋಡ್, ಕೋರ್ಡಿನೇಟರ್
ಜಿಲ್ಲಾ ಕುಟುಂಬಶ್ರೀ ಮಿಷನ್, ಕಾಸರಗೋಡು






