ಅಮೆರಿಕ : ವಿಶ್ವದ ದೊಡ್ಡಣ್ಣ ಡೋನಾಲ್ಡ್ ಟ್ರಂಪ್ (Donald Trump ) ಹುಚ್ಚುತನದ ಹೇಳಿಕೆ ಮತ್ತೆ ಮುಂದುವರಿದಿದೆ. ರಷ್ಯಾದಿಂದ (Russia) ಕಚ್ಚಾ ತೈಲ ( Crude Oil) ಖರೀದಿಸುವುದನ್ನು ಮುಂದುವರಿಸಿರುವ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಭಾರತವು ರಷ್ಯಾದ ಯುದ್ಧ ಯಂತ್ರಕ್ಕೆ ಇಂಧನ ಒದಗಿಸುತ್ತಿದೆ ಎಂದು ಆರೋಪಿಸಿರುವ ಟ್ರಂಪ್, ಮುಂದಿನ 24 ಗಂಟೆಗಳಲ್ಲಿ ಭಾರತೀಯ ಆಮದುಗಳ ಮೇಲಿನ ಸುಂಕವನ್ನು ಗಮನಾರ್ಹವಾಗಿ ಹೆಚ್ಚಿಸುವುದಾಗಿ ಮತ್ತೊಮ್ಮೆ ಬೆದರಿಕೆ ಒಡ್ಡಿದ್ದಾರೆ.
ಭಾರತ ಅತಿ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರವಾಗಿದೆ. ಅವರ ತೆರಿಗೆ ಅತಿ ಹೆಚ್ಚಾಗಿರುವುದರಿಂದ ನಾವು ಅವರೊಂದಿಗೆ ಅತ್ಯಂತ ಕಡಿಮೆ ವ್ಯವಹಾರ ನಡೆಸುತ್ತೇವೆ. ಅವರು ಅತಿ ಗರಿಷ್ಠ ತೆರಿಗೆ ವಿಧಿಸುವ ಕಾರಣ ನಾವು ಅವರ ಮೇಲೆ ಶೇ.25ರಷ್ಟು ತೆರಿಗೆ ನಿಗದಿಪಡಿಸಿದ್ದೆವು. ಆದರೆ ಮುಂದಿನ 24 ಗಂಟೆಗಳಲ್ಲಿ ನಾನು ಅದನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ. ಏಕೆಂದರೆ ಅವರು ರಷ್ಯಾದ ತೈಲವನ್ನು ಖರೀದಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಭಾರತದ ನೀತಿ ನನಗೆ ಸಂತೋಷ ನೀಡುತ್ತಿಲ್ಲ. ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸದಿದ್ದರೆ, ತೆರಿಗೆಯನ್ನು ಇತ್ತಷ್ಟು ಏರಿಸುವುದಾಗಿ ಸೋಮವಾರವಷ್ಟೇ ಟ್ರಂಪ್ ಬೆದರಿಕೆ ಹಾಕಿದ್ದರು. ಇದೀಗ 24 ಗಂಟೆಯೊಳಗೆ ಅದನ್ನು ಜಾರಿಗೆ ತರಲು ಮುಂದಾಗಿದ್ದಾರೆ.
ಭಾರತದ ಮೇಲೆ ಶೇ.25 ತೆರಿಗೆ ವಿಧಿಸಿರುವ ಅಮೆರಿಕಾದ ಕ್ರಮದಿಂದಾಗಿ ಇದೀಗ ಎಲೆಕ್ಟ್ರಾನಿಕ್ ಉಪಕರಣಗಳು, ವಾಹನ, ಬಿಡಿಭಾಗಗಳು, ರತ್ನಗಳು, ಜವಳಿ, ಕಬ್ಬಿಣ, ಸ್ಟೀಲ್, ಕೃಷಿ ಮತ್ತು ಸಾಗರ ಉತ್ಪನ್ನ ಸೇರಿದಂತೆ ಭಾರತದ ಹಲವು ಕ್ಷೇತ್ರಗಳಿಗೆ ತೆರಿಗೆಯ ಬಿಸಿ ತಟ್ಟಲಿದೆ. ಪ್ರಸಕ್ತ ಭಾರತದ ಜವಳಿಗೆ ಅಮೆರಿಕದಲ್ಲಿ ಶೇ.8ರಷ್ಟು ತೆರಿಗೆ ಇದ್ದರೆ, ಇನ್ನು ಮುಂದೆ ಅದು ಶೇ.33ಕ್ಕೆ ಏರಲಿದೆ. ಇದು ಭಾರತದ ವಹಿವಾಟು ಕ್ಷೇತ್ರಕ್ಕೆ ತೀವ್ರ ಹೊಡೆತ ಕೊಡುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನು, ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದ್ದು, ಇದೀಗ ಕಲಾವಿದನೋರ್ವ ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನ ಬೀದಿಯೊಂದರ ಮ್ಯಾನ್ ಹೋಲ್ ನಲ್ಲಿ ಟ್ರಂಪ್ ಅವರ ಕೆಂಪು ಪ್ರತಿಮೆಯೊಂದು ನಿರ್ಮಿಸುವ ಮೂಲಕ ಟ್ರಂಪ್ ಆಡಳಿತವನ್ನು ಅಣುಕಿಸಿದ್ದಾರೆ.
ಫ್ರೆಂಚ್ ಕಲಾವಿದ ಜೇಮ್ಸ್ ಕೊಲೊಮಿನಾ ಎಂಬುವವರು ರಚಿಸಿದ ಪ್ರತಿಮೆಯಲ್ಲಿ, ಟ್ರಂಪ್ ಅವರ ಅರ್ಧ ದೇಹವನ್ನು ರಚಿಸಿದ್ದು, ಇದರಲ್ಲಿ ಸೂಟ್ ಮತ್ತು ಟೈ ಧರಿಸಿ, ಚರಂಡಿಯಿಂದ ಮೇಲಕ್ಕೆ ಬರುತ್ತಿರುವುದನ್ನು ಚಿತ್ರಿಸಲಾಗಿದೆ.
ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನ ಟ್ರಂಪ್ ಟವರ್‌ನಿಂದ ಸರಿಸುಮಾರು ಒಂದು ಕಿಮೀ ದೂರದಲ್ಲಿರುವ ಪೂರ್ವ 42 ನೇ ಬೀದಿ ಮತ್ತು 2 ನೇ ಅವೆನ್ಯೂದಲ್ಲಿ ಟ್ರಂಪ್ ಅವರ ಪ್ರತಿಮೆಯನ್ನು ರಚಿಸಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ಜೇಮ್ಸ್ ಕೊಲೊಮಿನಾ ಅವರು, ನಾನು ಆ ಶಿಲ್ಪವನ್ನು ನ್ಯೂಯಾರ್ಕ್‌ನಲ್ಲಿ ಸ್ಥಾಪಿಸಿದ್ದೇನೆ. ಏಕೆಂದರೆ ಟ್ರಂಪ್ ಸಾಮ್ರಾಜ್ಯ ನಿರ್ಮಿಸಿದ್ದು ಇಲ್ಲೇ. ಚಿನ್ನದ ಗೋಪುರಗಳು ಮತ್ತು ಕೆಲಸವನ್ನು ಕೂಡ ಇಲ್ಲಿಂದಲೇ ಆರಂಭಿಸಿದ್ದು, ಹೀಗಾಗಿ ಇಲ್ಲೇ ಒಳಚರಂಡಿಯಿಂದ ಮೇಲೇರುತ್ತಿರುವ ಕೆಂಪು ದೇಹದ ಚಿತ್ರ ಬಿಡಿಸಿದ್ದೇನೆ ಎಂದು ಹೇಳಿದರು.
ಈ ಚಿತ್ರದಲ್ಲಿ ಟ್ರಂಪ್ ಮ್ಯಾನ್ ಹೋಲ್ ನಿಂದ ಕೆಂಪು ಬಣ್ಣದ ಸೂಟ್ ಧರಿಸಿ ಮೇಲಕ್ಕೆ ಎದ್ದು ಬಂದು ಬೃಹತ್ ಕಟ್ಟಡಗಳನ್ನು ತಲೆ ಎತ್ತಿ ನೋಡುತ್ತಿರುವಂತೆ ಭಾಸವಾಗುತ್ತಿದೆ. ಅಷ್ಟೇ ಅಲ್ಲದೆ, ಟ್ರಂಪ್ ಜೊತೆ ಇಲಿಯೊಂದು ಮ್ಯಾನ್ ಹೋಲ್ ಮುಚ್ಚಳದ ಕೆಳಗೆ ಹೊರಕ್ಕೆ ಇಣುಕಿರೋದು ಕಂಡು ಬಂದಿದೆ.
ಫ್ರೆಂಚ್ ಕಲಾವಿದ ಜುಲೈ 23 ರಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಮೆರಿಕವನ್ನು ಮತ್ತೆ ಕೊಳಕು ಮಾಡೋಣ ಎಂಬ ಶೀರ್ಷಿಕೆಯೊಂದಿಗೆ ಶಿಲ್ಪದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಇದು ಟ್ರಂಪ್ ಅವರ ಧ್ಯೇಯವಾಕ್ಯವಾದ ಅಮೆರಿಕವನ್ನು ಮತ್ತೆ ಗ್ರೇಟ್ ಮಾಡೋಣ ಅನ್ನು ಉಲ್ಲೇಖಿಸಿದೆ.




