HEALTH TIPS

ಆಶ್ರಯ ತಾಣಗಳಲ್ಲಿರಲಿ ಬೀದಿನಾಯಿ; ರಕ್ಷಣೆಗೆ ಬಂದರೆ ಕಠಿಣ ಕ್ರಮ: ಸುಪ್ರೀಂ ಕೋರ್ಟ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೀದಿ ನಾಯಿಗಳ ಉಪಟಣ ಹೆಚ್ಚಳವಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, 'ತಕ್ಷಣದಿಂದಲೇ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು, ಆಶ್ರಯ ಕೇಂದ್ರದಲ್ಲಿಡಿ' ಎಂದು ದೆಹಲಿ ಸರ್ಕಾರ ಮತ್ತು ಪಾಲಿಕೆಗೆ ಖಡಕ್ ನಿರ್ದೇಶನ ನೀಡಿದೆ.

ನಗರದಲ್ಲಿ ಹೆಚ್ಚುತ್ತಿರುವ ನಾಯಿ ಕಡಿತ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌, 'ಬೀದಿ ನಾಯಿಗಳನ್ನು ರಕ್ಷಿಸಲು ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಮುಂದಾದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ನ್ಯಾ. ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾ. ಆರ್. ಮಹಾದೇವನ್ ಅವರಿದ್ದ ಪೀಠವು ಎಚ್ಚರಿಕೆ ನೀಡಿದೆ.

'ಪಾಲಿಕೆ ವ್ಯಾಪ್ತಿಯಲ್ಲಿ ನಾಯಿ ಆಶ್ರಯ ತಾಣಗಳಲ್ಲಿ ಐದು ಸಾವಿರ ಬೀದಿ ನಾಯಿಗಳನ್ನು ಇಡಲು ಅವಕಾಶವಿದೆ. ನಾಯಿಗಳಿಗೆ ಸೂಕ್ತ ಲಸಿಕೆ ಹಾಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಬೇಕು. ನಾಯಿಗಳನ್ನು ಬೀದಿಗಳಲ್ಲಿ, ಕಾಲೊನಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಡದೆ, ಇಂಥ ಕೇಂದ್ರಗಳಲ್ಲೇ ಇಡಬೇಕು' ಎಂದು ಪೀಠ ಹೇಳಿದೆ.

'ಸಾರ್ವಜನಿಕರ ಹಿತಕ್ಕಾಗಿ ಈ ನಿರ್ದೇಶನ ನೀಡಲಾಗುತ್ತಿದೆ. ಶಿಶುಗಳು, ಮಕ್ಕಳು ನಾಯಿಗಳ ದಾಳಿಗೆ ತುತ್ತಾಗಬಾರದು. ಅವುಗಳ ಕಡಿತದಿಂದ ರೇಬಿಸ್‌ಗೆ ಒಳಗಾಗುವ ಅಪಾಯದಿಂದ ಮಕ್ಕಳನ್ನು ಪಾರು ಮಾಡಬೇಕು. ನಾಯಿ ಕಡಿತ ಪ್ರಕರಣವನ್ನು ವರದಿ ಮಾಡಲು ಅನುಕೂಲವಾಗುವಂತೆ ವಾರದ ಅವಧಿಯೊಳಗೆ ಸಹಾಯವಾಣಿ ಆರಂಭಿಸಬೇಕು' ಎಂದಿದ್ದಾರೆ.

ದೆಹಲಿಯಲ್ಲಿ ನಾಯಿ ಕಡಿತ ಮತ್ತು ರೇಬಿಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕುರಿತು ಮಾಧ್ಯಮ ವರದಿಗಳನ್ನು ಆಧರಿಸಿ ಜುಲೈ 28ರಂದು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣದ ವಿಚಾರಣೆ ಆರಂಭಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries