HEALTH TIPS

ಲಿಪುಲೇಖ್‌ ಪಾಸ್‌ ಮೂಲಕ ಭಾರತ-ಚೀನಾ ವ್ಯಾಪಾರಕ್ಕೆ ನೇಪಾಳ ಆಕ್ಷೇಪ

 ಕಠ್ಮಂಡು: ಲಿಪುಲೇಖ್‌ ಪಾಸ್ ಮೂಲಕ ಗಡಿ ವ್ಯಾಪಾರವನ್ನು ಪುನರಾರಂಭಿಸುವ ಭಾರತ-ಚೀನಾ ನಿರ್ಧಾರಕ್ಕೆ ನೇಪಾಳ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಲಿಪುಲೇಖ್‌ ನೇಪಾಳದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದೆ.

ಮಂಗಳವಾರ ಲಿಪುಲೇಖ್ ಪಾಸ್ ಮತ್ತು ಇತರ ಎರಡು ವ್ಯಾಪಾರ ಕೇಂದ್ರಗಳ ಮೂಲಕ ಗಡಿ ವ್ಯಾಪಾರವನ್ನು ಪುನರಾರಂಭಿಸಲು ಭಾರತ-ಚೀನಾ ಒಪ್ಪಿಕೊಂಡಿವೆ.

ಈ ಕುರಿತು ಪ್ರತಿಕ್ರಿಯಿಸಿದ ನೇಪಾಳ ವಿದೇಶಾಂಗ ಸಚಿವಾಲಯ, ಲಿಪುಲೇಖ್‌ ನೇಪಾಳಕ್ಕೆ ಸೇರಿದ್ದರಿಂದ ಆ ಪ್ರದೇಶದಲ್ಲಿ ವ್ಯಾಪಾರ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸಬಾರದು ಎಂದು ಹೇಳಿದೆ.

ಲಿಪುಲೇಖ್‌ ಕುರಿತು ನೇಪಾಳದ ಆಕ್ಷೇಪಣೆಯನ್ನು ತಿರಸ್ಕರಿಸಿರುವ ಭಾರತವು, ನೇಪಾಳದ ಹೇಳಿಕೆ ನ್ಯಾಯಸಮ್ಮತವಾಗಿಲ್ಲ ಮತ್ತು ಐತಿಹಾಸಿಕ ಪುರಾವೆಗಳಿಂದ ಕೂಡಿಲ್ಲ ಎಂದು ಹೇಳಿದೆ.

'ಲಿಪುಲೇಖ್ ಪಾಸ್ ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರವನ್ನು ಪುನರಾರಂಭಿಸುವ ಬಗ್ಗೆ ನೇಪಾಳದ ವಿದೇಶಾಂಗ ಸಚಿವಾಲಯದ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಈ ವಿಷಯದಲ್ಲಿ ನಮ್ಮ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ. ಲಿಪುಲೇಖ್ ಪಾಸ್ ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರವು 1954 ರಲ್ಲಿ ಪ್ರಾರಂಭವಾಯಿತು ಮತ್ತು ದಶಕಗಳಿಂದ ನಡೆಯುತ್ತಿದೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

'ಕೋವಿಡ್-19 ಸೇರಿದಂತೆ ಇತರ ಕಾರಣಗಳಿಂದ ಲಿಪುಲೇಖ್‌ ಪಾಸ್‌ ಮೂಲಕ ನಡೆಯುತ್ತಿದ್ದ ವ್ಯಾಪಾರವು ಸ್ಥಗಿತಗೊಂಡಿತ್ತು. ಈಗ ಉಭಯ ದೇಶಗಳು ವ್ಯಾಪಾರ ಪುನರಾರಂಭಿಸಲು ಒಪ್ಪಿಕೊಂಡಿವೆ' ಎಂದು ಜೈಸ್ವಾಲ್‌ ಹೇಳಿದ್ದಾರೆ.

'ಗಡಿ ಸಮಸ್ಯೆಗಳ ಕುರಿತು ನೇಪಾಳದೊಂದಿಗೆ ರಚನಾತ್ಮಕ ಸಂವಹನಕ್ಕೆ ಭಾರತ ಮುಕ್ತವಾಗಿದೆ' ಎಂದೂ ಅವರು ಹೇಳಿದ್ದಾರೆ.

2020ರಲ್ಲಿ, ಕಾಲಾಪಾನಿ, ಲಿಂಪಿಯಾಧೂರ ಮತ್ತು ಲಿಪುಲೇಖ್ ಪ್ರದೇಶಗಳನ್ನು ತನ್ನ ವ್ಯಾಪ್ತಿಯಲ್ಲಿ ಸೇರಿಸಿ ನೇಪಾಳವು ಪರಿಷ್ಕೃತ ನಕಾಶೆಯನ್ನು ಬಿಡುಗಡೆ ಮಾಡುವ ಮೂಲಕ ಗಡಿ ವಿವಾದವನ್ನು ಹುಟ್ಟುಹಾಕಿತ್ತು. ಇದನ್ನು ಭಾರತ ಬಲವಾಗಿ ತಿರಸ್ಕರಿಸಿತ್ತು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries