HEALTH TIPS

ಕಯ್ಯಾರರ ಬಹುಮುಖದ ಜೀವನ ಅಚ್ಚರಿಯೊಂದಿಗೆ ಅನುಕರಣೀಯ-ಡಾ.ಶ್ರೀಧರ ಎನ್.: ಕಯ್ಯಾರರ ಸಂಸ್ಮರಣಾ ಸಮಾರಂಭದಲ್ಲಿ ಅಭಿಮತ

ಮಂಜೇಶ್ವರ: ಕನ್ನಡ ಸಾಹಿತ್ಯದ ನವೋದಯ ಪೂರ್ವಕಾಲದಲ್ಲಿ ಕನ್ನಡದ ವಿವಿಧ ಕೆಲಸಗಳನ್ನು ಮಾಡಿದವರಲ್ಲಿ ಮಂಜೇಶ್ವರ ಗೋವಿಂದ ಪೈ ಹಾಗೂ ಕಯ್ಯಾರ ಕಿಞ್ಣಣ್ಣ ರೈಗಳು ಅವಿಸ್ಮರಣೀಯ ಚಟುವಟಿಕೆಗಳನ್ನು ಮಾಡಿದ ಮಹಾನುಭಾವರು. ಇದರಲ್ಲಿ ಕಯ್ಯಾರರು ಬಹುಮುಖ ಆಯಾಮಗಳಲ್ಲಿ ಕಾರ್ಯನಿರ್ವಹಿಸಿದವರು. ಸಾಹಿತ್ಯವಷ್ಟೇ ಅಲ್ಲದೆ, ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ, ವಿಲೀನೀಕರಣ ಹೋರಾಟಗಳೇ ಮೊದಲಾದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದವರು. ಅವರ ವೈವಿಧ್ಯಮಯ ಜೀವನ ಹೊಸ ತಲೆಮಾರಿಗೆ ಅಚ್ಚರಿಯೊಂದಿಗೆ ಅನುಕರಣೀಯ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀಧರ ಎನ್. ಅಭಿಪ್ರಾಯ ವ್ಯಕ್ತಪಡಿಸಿದರು.


ಕರ್ನಾಟಕ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಶನಿವಾರ ಕಾಲೇಜಿನ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆದ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಸಮಸ್ಮರಣೆ ಮತ್ತು ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಬದುಕನ್ನು ಹೋರಾಟದ ಮೂಲಕ ಕಟ್ಟಿಕೊಂಡು ಶತಾಯುಷಿಗಳಾಗಿ ಬದುಕಿದ ಕಯ್ಯಾರರ ಬದುಕು-ಬರಹಗಳು ಎಂದಿಗೂ ಪ್ರೇರಣದಾಯಿ. ಕಾವ್ಯ, ನಾಟಕ, ಪ್ರಬಂಧ, ಜೀವನ ಗಾಥೆಗಳು, ಭಾಷಾಂತರ, ಮಕ್ಕಳ ಸಾಹಿತ್ಯಗಳನ್ನು ನವೋದಯ, ಪ್ರಗತಿಪರ, ನವ್ಯ ಸಾಹಿತ್ಯಗಳಲ್ಲಿ ಅವರು ಬರೆದವರು. ಉಪನಿಷತ್ ಜ್ಞಾನವನ್ನು ಪಂಚಮಿಯ ಮೂಲಕ ಕನ್ನಡಕ್ಕೆ ತಂದ ಕಯ್ಯಾರರು ಅವರ ವಿಶಿಷ್ಟ ಭಾಷೆಯ ಮೂಲಕ ಗಮನ ಸೆಳೆದವರು ಎಂದವರು ನೆನಪಿಸದರು.


ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಮೊಹಮ್ಮದಲಿ ಕೆ.ಪೆರ್ಲ ಅವರು ಮಾತನಾಡಿ, ಗೋವಿಂದ ಪೈ ಮತ್ತು ಕಿಞ್ಞಣ್ಣ ರೈ ಗಳು ಕಾಸರಗೋಡಿನ ಎರಡು ಕಣ್ಣುಗಳಿದ್ದಂತೆ. ಇಲ್ಲಿಯ ಸಂಸ್ಕøತಿಯನ್ನು ಉಳಿಸಿ-ಬೆಳೆಸಲು ಅವರಿದ್ದ ಆಸಕ್ತಿ ಕ್ರಿಯಾತ್ಮಕವಾಗಿ ಗಮನಾರ್ಹವಾದುದು. ಕಾಸರಗೋಡಿನ ಕನ್ನಡ ಅಸ್ಮಿತೆಯನ್ನು ಕಾಪಿಡುವಲ್ಲಿ ಕಯ್ಯಾರರಿಗಿದ್ದ ಹೃದಯಪೂರ್ಣ ಹೋರಾಟ .ಚಟುವಟಿಕೆ ಸ್ತುತ್ಯರ್ಹವಾದುದು. ನವ ತಲೆಮಾರು ಇಲ್ಲಿಯ ಕನ್ನಡ ಬೇರುಗಳನ್ನು ಗಟ್ಟಿಗೊಳಿಸಲು ಕಯ್ಯಾರರ ಚಟುವಟಿಕೆಯಿಂದ ಪ್ರೇರಣೆಗೊಳ್ಳಬೇಕು ಎಮದು ಕರೆ ನೀಡಿದರು. 

ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕವಿತಾ ಕುಟೀರದ ಕಾರ್ಯದರ್ಶಿ, ನಿವೃತ್ತ ಪ್ರಾಧ್ಯಾಪಕ ಡಾ.ಪ್ರಸನ್ನ ರೈ ಕೆ, ಭುವನಪ್ರಸಾದ ಹೆಗ್ಡೆ ಉಪಸ್ಥಿತರಿದ್ದು ಮಾತನಾಡಿದರು.


ಈ ಸಂದರ್ಭ ಕುಮಾರಿ ದೀಕ್ಷಿತ ಅವರು ಬರೆದು ಪ್ರಕಟಿಸಿದ ಧ್ವನಿ ಲಘು ಬರಹಗಳ ಸಂಕಲನವನ್ನು ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೊಡಿ ಬಿಡುಗಡೆಗೊಳಿಸಿದರು. ಮೀಯಪದವು ವಿದ್ಯಾವರ್ಧಕ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ಟಿ. ಧ್ವನಿಯ ಕೃತಿ ಪರಿಚಯ ನೀಡಿ ಮಾತನಾಡಿದರು. ಕಾಲೇಜಿನ ಕಚೇರಿ ಅಧೀಕ್ಷಕ ದಿನೇಶ ಕೆ. ಶುಭಾಶಂಸನೆಗೈದರು. 

ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ಕಯ್ಯಾರ ಕಿಞ್ಞಣ್ಣ ರೈಗಳ ಬದುಕು-ಬರಹಗಳ ವಿವಿಧ ಆಯಾಮಗಳಲ್ಲಿ ಸರ್ವಾಣಿ ಬಿ.ಕೆ, ಕಿಶನ್ ರಾಜ್, ಸೈಫನ್ ಸಾಬ್, ಅನುಪ್ರಭ, ಶಿವಾನಿ, ತನ್ವಿ ಪ್ರಬಂಧ ಮಂಡಿಸಿದರು. ವಿದ್ಯಾಲಕ್ಷ್ಮಿ, ನಂದಿನಿ, ಲಾವಣ್ಯ, ಪೂಜಾ, ಶಿವಾನಿ, ತನುಶ್ರೀ, ತೇಜಾಕ್ಷಿ, ಅನೂಶ ಅವರಿಂದ ಕಯ್ಯಾರರ ಕೃತಿಗಳ ಕಾವ್ಯ ಗಾಯನ ನಡೆಯಿತು. 

ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಶಿವಶಂಕರ ಪಿ.ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕ ಡಾ.ಸುಜೇಶ್ ಎಸ್ .ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಜಯಂತಿ.ಕೆ. ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries