ನವದೆಹಲಿ(PTI): 'ಸ್ಟಾಫ್ ಸೆಲೆಕ್ಷನ್ ಕಮಿಷನ್' (ಎಸ್‌ಎಸ್‌ಸಿ) ವಿವಿಧ ನೇಮಕಾತಿಗಳಿಗೆ ಪರೀಕ್ಷಾ ಸೂಚನಾ ಅವಧಿಯನ್ನು 45 ದಿನಗಳಿಂದ 21 ದಿನಗಳಿಗೆ ಕಡಿತಗೊಳಿಸುವುದೂ ಸೇರಿದಂತೆ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಪರಿಚಯಿಸಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ತಿಳಿಸಿದೆ.
ಈ ಕ್ರಮಗಳ ಪರಿಣಾಮ ವಿವಿಧ ಪರೀಕ್ಷೆಗಳ ನೇಮಕಾತಿ ಪ್ರಕ್ರಿಯೆಯು 15-18 ತಿಂಗಳಗಳಿಂದ 6-10 ತಿಂಗಳಿಗೆ ಇಳಿಸಿದಂತಾಗಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರ ನೀಡಿದ್ದಾರೆ.
ಪೆನ್ ಮತ್ತು ಪೇಪರ್ ಆಧಾರಿತ ಪರೀಕ್ಷೆಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಿಗೆ ಪರಿವರ್ತಿಸುವುದು, ಪರೀಕ್ಷಾ ಹಂತಗಳ ಸಂಖ್ಯೆಯನ್ನು ಕಡಿತಗೊಳಿಸುವುದು, ವಿವರಣಾತ್ಮಕ ಮಾದರಿ ಪತ್ರಿಕೆಗಳನ್ನು ತೆಗೆಯುವುದು (ಸಂಯೋಜಿತ ಹಿಂದಿ ಭಾಷಾಂತರ ಪರೀಕ್ಷೆ ಹೊರತುಪಡಿಸಿ) ಸೇರಿದಂತೆ ಹಲವು ಸುಧಾರಣಾ ಕ್ರಮಗಳಲ್ಲಿ ಸೇರಿವೆ ಎಂದು ಸಚಿವರು ಹೇಳಿದ್ದಾರೆ.




