HEALTH TIPS

ಆಧಾರ್, ಪ್ಯಾನ್‌ ಕಾರ್ಡ್‌ ಇದ್ದರೆ ಭಾರತದ ಪ್ರಜೆಯಾಗುವುದಿಲ್ಲ: ಬಾಂಬೆ ಹೈಕೋರ್ಟ್‌

ಮುಂಬೈ: 'ಆಧಾರ್‌, ಮತದಾರರ ಗುರುತಿನ ಚೀಟಿ, ಪ್ಯಾನ್‌ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ) ಹೊಂದಿದ ಮಾತ್ರಕ್ಕೆ ಭಾರತದ ಪ್ರಜೆಯಾಗಲಾರ' ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ‍್ರವೇಶಿಸಿದ್ದ ಬಾಂಗ್ಲಾದೇಶದ ಪ್ರಜೆಗೆ ಜಾಮೀನು ನೀಡಲು ನಿರಾಕರಿಸಿದೆ.

ಬಾಂಗ್ಲಾದೇಶದ ಪ್ರಜೆಯು ಕಳೆದೊಂದು ದಶಕದಿಂದ ಭಾರತದಲ್ಲಿ ನೆಲಸಿದ್ದು, ನಕಲಿ ದಾಖಲೆಗಳನ್ನು ಹೊಂದಿದ್ದರು.

'ಪೌರತ್ವ ಕಾಯ್ದೆಯು, ಯಾರು ದೇಶದ ಪ್ರಜೆಯಾಗಬಹುದು, ಹೇಗೆ ಪೌರತ್ವ ಪಡೆಯಬಹುದು ಎಂಬುದನ್ನು ವ್ಯಾಖ್ಯಾನಿಸುತ್ತದೆ. ಅದೇ, ರೀತಿ, ಆಧಾರ್‌ಕಾರ್ಡ್‌, ಪ್ಯಾನ್‌ಕಾರ್ಡ್‌, ಮತದಾರರ ಗುರುತಿನ ಚೀಟಿಯು ವ್ಯಕ್ತಿಯ ಗುರುತಿಸುವಿಕೆ, ಸೇವೆಯನ್ನು ಪಡೆಯಲಷ್ಟೇ ಅರ್ಹವಾಗಿರುತ್ತದೆ' ಎಂದು ಅಮಿತ್‌ ಬೋರ್ಕರ್‌ ನೇತೃತ್ವದ ನ್ಯಾಯಪೀಠವು ತಿಳಿಸಿದೆ.

ಅದೇ ರೀತಿ, ಮಾನ್ಯತೆ ಹೊಂದದ ಪಾಸ್‌ಪೋರ್ಟ್‌ ಹಾಗೂ ಪ್ರಯಾಣ ದಾಖಲೆ ಹೊಂದದೇ, ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ, ಬಾಂಗ್ಲಾ ದೇಶದ ನಾಗರಿಕ ಬಾಬು ಅಬ್ದುಲ್‌ ರೌಫ್‌ ಸರ್ದಾರ್‌ಗೆ ಜಾಮೀನು ನೀಡಲು ನ್ಯಾಯಾಲಯವು ನಿರಾಕರಿಸಿದೆ. ಆಧಾರ್‌ ಕಾರ್ಡ್‌, ಪ್ಯಾನ್‌ಕಾರ್ಡ್‌, ಮತದಾರರ ಗುರುತಿನ ಚೀಟಿ ಹಾಗೂ ಭಾರತದ ಪಾಸ್‌ಪೋರ್ಟ್‌ ಅನ್ನು ಅಕ್ರಮವಾಗಿ ಪಡೆದಿದ್ದ ಆರೋಪವೂ ಇವರ ಮೇಲಿದೆ.

'1955ರಲ್ಲಿ ಭಾರತದ ಸಂಸತ್‌ ಪೌರತ್ವ ಕಾಯ್ದೆಯನ್ನು ಅಂಗೀಕರಿಸಿದ್ದು, ದೇಶದ ಪೌರತ್ವ ಪಡೆಯಲು ಶಾಶ್ವತ ಹಾಗೂ ಸಂಪೂರ್ಣ ವ್ಯವಸ್ಥೆಯನ್ನು ರೂಪಿಸಿದೆ' ಎಂದು ನ್ಯಾಯಮೂರ್ತಿ ಬೋರ್ಕರ್‌ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

'ನನ್ನ ಅಭಿಪ್ರಾಯದಂತೆ, 1955ರ ಭಾರತದ ಪೌರತ್ವ ಕಾಯ್ದೆಯು ಇಂದು ದೇಶದಲ್ಲಿ ರಾಷ್ಟ್ರೀಯತೆ ಪ್ರಶ್ನೆಗಳನ್ನು ಎದುರಿಸಲು ಮುಖ್ಯ ಹಾಗೂ ನಿಯಂತ್ರಿಸುವ ಕಾನೂನು ಆಗಿದೆ. ಯಾರು ನಾಗರಿಕರಾಗಬಹುದು, ಯಾರು ಪೌರತ್ವ ಪಡೆಯಬಹುದು ಹಾಗೂ ಹೇಗೆ ಕಳೆದುಕೊಳ್ಳಬಹುದು ಎಂಬುದನ್ನು ಸ್ಪಷ್ಟವಾಗಿ ಇದು ನಿರೂಪಿಸಿದೆ' ಎಂದು ಹೇಳಿದ್ದಾರೆ.

'ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ಮತದಾರರ ಗುರುತಿನ ಚೀಟಿಯನ್ನು ಹೊಂದಿದ ಮಾತ್ರಕ್ಕೆ ಯಾರನ್ನಾದರೂ ಭಾರತದ ಪ್ರಜೆಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ. ಈ ಎಲ್ಲಾ ದಾಖಲೆಗಳು ಗುರುತಿಸುವಿಕೆ, ಸೇವೆ ಪಡೆಯಲ್ಲಷ್ಟೇ ಅರ್ಹವಾಗಿದೆ. ಆದರೆ, ಅವರು ಪೌರತ್ವ ಕಾಯ್ದೆಯಲ್ಲಿ ರೂಪಿಸಿದಂತೆ, ಈ ದಾಖಲೆಗಳು ಪೌರತ್ವದ ಮೂಲಭೂತ ಕಾನೂನನ್ನು ಪೂರೈಸಿದಂತೆ ಆಗುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.

'ಕಾನೂನು ಬದ್ಧ ನಾಗರಿಕರು ಹಾಗೂ ಅಕ್ರಮ ವಲಸಿಗರ ನಡುವೆ ಕಾನೂನು ಸ್ಪಷ್ಟ ರೇಖೆಯನ್ನು ಎಳೆಯುತ್ತದೆ' ಎಂದು ನ್ಯಾಯಪೀಠವು ತಿಳಿಸಿದೆ.

'ಅಕ್ರಮ ವಲಸಿಗರು ಪೌರತ್ವ ಕಾಯ್ದೆಯಡಿಯಲ್ಲಿ ಉಲ್ಲೇಖಿಸಲಾದ ಮಾರ್ಗಗಳ ಮೂಲಕ ದೇಶದ ಪೌರತ್ವ ಪಡೆಯುವುದನ್ನು ನಿರ್ಬಂಧಿಸಲಾಗಿದೆ. ದೇಶದ ಸಾರ್ವಭೌಮತೆಯ ರಕ್ಷಣೆಯ ನಿಟ್ಟಿನಲ್ಲಿ ಈ ಭಿನ್ನತೆಯು ಮುಖ್ಯವಾಗಿದೆ. ಅಲ್ಲದೇ, ನಾಗರಿಕರಿಗೆ ಪ್ರಯೋಜನ ಹಾಗೂ ಹಕ್ಕುಗಳನ್ನು ಖಚಿಪಡಿಸುತ್ತದೆ. ಆ ಮೂಲಕ ವಾಮಮಾರ್ಗದ ಮೂಲಕ ಅದನ್ನು ಪಡೆದುಕೊಂಡವರಿಗೆ ದೇಶದಲ್ಲಿ ನೆಲಸಲು ಕಾನೂನಿನ ಮಾನ್ಯತೆ ಹೊಂದಿರುವುದಿಲ್ಲ' ಎಂದು ಸ್ಪಷ್ಟಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries