ಕೋಝಿಕ್ಕೋಡ್: ಕೋಯಿಕ್ಕೋಡ್‌ನಲ್ಲಿ 9 ವರ್ಷದ ಬಾಲಕಿ ಅಮೀಬಿಕ್ ಎನ್ಸೆಫಲಿಟಿಸ್ ಎಂಬ ಅಪರೂಪದ ಮೆದುಳು ಕಾಯಿಲೆಗೆ ತುತ್ತಾಗಿ ಮೃತಪಟ್ಟಿರುವುದಾಗಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿಯು ತೀವ್ರ ಜ್ವರದ ಕಾರಣ ಆ.13ರಂದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಳು.
ಅವಳ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಆ.14ರಂದು ತುರ್ತಾಗಿ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಅಸುನೀಗಿದ್ದಾಳೆ ಎಂದು ಹಿರಿಯ ಆರೋಗ್ಯಾಧಿಕಾರಿಯೊಬ್ಬರು ಢೃಡ ಪಡಿಸಿದ್ದಾರೆ.
ಬಾಲಕಿಯ ಸಾವಿಗೆ ಕಾರಣವನ್ನು ಪತ್ತೆಹಚ್ಚಲು ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಯು ಅಮೀಬಿಕ್ ಎನ್ಸೆಫಾಲಿಟಿಸ್ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ತಿಳಿದಿದು ಬಂದಿದೆ ಎಂದು ವೈಧ್ಯಾಧಿಕಾರಿಗಳು ಅಧಿಕೃತವಾಗಿ ಹೇಳಿದ್ದಾರೆ.
ಮೃತ ಬಾಲಕಿಯು ತಾಮರಸ್ಸೇರಿಯ ನಿವಾಸಿಯಾಗಿದ್ದಳು. ಸ್ಥಳೀಯವಾಗಿ ಅವಳಿಗೆ ಸೋಂಕು ತಗುಲಿದ ನೀರಿನ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಬಳಿಕ ಇತ್ತೀಚೆಗೆ ಆ ನೀರಿನಲ್ಲಿ ಸ್ನಾನ ಮಾಡಿರಬಹುದಾದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಅಮೀಬಿಕ್ ಎನ್ಸೆಫಲಿಟಿಸ್ ಅಮೀಬಾದಿಂದ ಉಂಟಾಗುವ ಕಾಯಿಲೆಯಾಗಿದೆ. ಈ ಅಮೀಬಾವು ಕಲುಷಿತ ನೀರಿನಲ್ಲಿ ವಾಸವಿರುತ್ತದೆ. ಇದು ಅಪರೂಪದ ಮಿದುಳಿನ ಸೋಂಕಿಗೆ ಕಾರಣವಾಗುತ್ತದೆ. ಸರೋವರಗಳು, ಕೆರೆಗಳು, ನದಿಗಳು ಹಾಗೂ ಇತರೆ ಸಿಹಿ ನೀರಿನ ಮೂಲಗಳಲ್ಲಿ ವಾಸಿಸುತ್ತದೆ. ಈ ವರ್ಷ ಇಡೀ ಜಿಲ್ಲೆಯಲ್ಲಿ ವರದಿಯಾದ ಅಪರೂಪದ ಮಿದುಳಿನ ಸೋಂಕಿನ ನಾಲ್ಕನೇ ಪ್ರಕರಣ ಇದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

