ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮಾಹಿತಿಯನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.
1978ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದವರ ಮಾಹಿತಿ ಕೋರಿ ಆರ್‌ಟಿಐ ಅರ್ಜಿ ಸಲ್ಲಿಸಲಾಗಿತ್ತು.
ಪ್ರಧಾನಿ ಮೋದಿ ಅದೇ ವರ್ಷ ಪದವಿ ಪಡೆದಿದ್ದಾರೆ. ದಾಖಲೆಗಳನ್ನು ಪರಿಶೀಲಿಸಲು 2016 ರಲ್ಲಿ ಸಿಐಸಿ ಆದೇಶ ನೀಡಿತ್ತು.
ಸಿಐಸಿ ಆದೇಶವನ್ನು ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ. ಸಚಿನ್ ದತ್ತ ಅವರಿದ್ದ ಪೀಠವು ಅರ್ಜಿ ವರ್ಜಾಗೊಳಿಸಿದೆ.
ದೆಹಲಿ ವಿ.ವಿ ಪರ ವಾದ ಮಂಡಿಸಿದ ವಕೀಲನ ತುಷಾರ್ ಮೆಹ್ತಾ, ಸಿಐಸಿ ಆದೇಶವನ್ನು ರದ್ದು ಪಡಿಸಬೇಕು ಎಂದು ಕೋರಿದ್ದರು.
'ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಲು ವಿಶ್ವವಿದ್ಯಾಲಯವು ಸಿದ್ದವಿದೆ. ಪ್ರಧಾನಿ ಮೋದಿ ಅವರು 1978 ರಲ್ಲಿ ಬಿ.ಎ ಪದವಿ ಪಡೆದಿದ್ದಾರೆ' ಎಂದು ಮೆಹ್ತಾ ಅವರು ತಿಳಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯ ಅನುಪಸ್ಥಿತಿಯಲ್ಲಿ ಆರ್‌ಟಿಐ ಅಡಿಯಲ್ಲಿ ಒಬ್ಬರ ಖಾಸಗಿ ಮಾಹಿತಿಯನ್ನು ಪಡೆಯಲು ಯಾರಿಗೂ ಬಿಡಬಾರದು ಎಂದು ದೆಹಲಿ ವಿಶ್ವವಿದ್ಯಾಲಯವು ಸಿಐಸಿ ಆದೇಶವನ್ನು ಪ್ರಶ್ನಿಸಿತ್ತು.
ಸಾರ್ವಜನಿಕರ ಮಾಹಿತಿಗಾಗಿ ಪ್ರಧಾನಿಯವರ ಶೈಕ್ಷಣಿಕ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನಂತರ ಸಿಐಸಿ ಆದೇಶವನ್ನು ಅರ್ಜಿದಾರರು ಸ್ವಾಗತಿಸಿದ್ದರು.
2017ರ ಜನವರಿಯಲ್ಲಿ ಕೂಡ ಸಿಐಸಿ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿತ್ತು.




