ಕೊಚ್ಚಿ: ಕೇರಳದ ಕೊಚ್ಚಿ ಮೆಟ್ರೊದಲ್ಲಿ ಇಂದು ಭಾರಿ ಆಶ್ಚರ್ಯಕರ ಘಟನೆ ಒಂದು ನಡೆದಿದ್ದು ಯುವಕನೊಬ್ಬ ಮೆಟ್ರೊ ನಿಲ್ದಾಣದಿಂದ ಹಳಿ ಹಿಡಿದು ಓಡಿ ಹೋಗಿ ಎತ್ತರಿಸಿದ ಮಾರ್ಗದ ಸೇತುವೆಯಿಂದ (ವಯಾಡಕ್ಟ್) ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.
ಕೊಚ್ಚಿ ಮೆಟ್ರೊದ ವಡಕ್ಕೆಕೊಟ್ಟಾ ನಿಲ್ದಾಣ ಹಾಗೂ ತ್ರಿಪ್ಪುನಿತುರ ನಿಲ್ದಾಣಗಳ ಮಧ್ಯೆ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ.
ನಿಸಾರ್, ವಡಕ್ಕೆಕೊಟ್ಟಾದಿಂದ ತ್ರಿಪ್ಪುನಿತುರಕ್ಕೆ ಮೆಟ್ರೊ ಟಿಕೆಟ್ ಖರೀದಿಸಿ ಪ್ರಯಾಣ ಮಾಡಲು ಪ್ಲಾಟ್‌ಫಾರ್ಮ್‌ಗೆ ಬಂದಿದ್ದರು. ಈ ವೇಳೆ ನಿಸಾರ್, ರೈಲು ಬರುವ ಮೊದಲೇ ಹಳಿ ಮೇಲೆ ಇಳಿದು ಓಡಿ ಹೋಗಿದ್ದರು.
ಯುವಕ ಹಳಿ ಮೇಲೆ ಓಡುವಾಗ ಮೆಟ್ರೊ ಸಿಬ್ಬಂದಿ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ರೆಡ್ ಅಲರ್ಟ್ ಘೋಷಿಸಿದ್ದರು. ನಿಸಾರ್ ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಮೇಲೆ ನಿಂತಿದ್ದ ಜಾಗದ ಕೆಳಗೆ ಅದಾಗಲೇ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಲು ಯತ್ನಿಸಿದ್ದರು. ಕೆಲವರು ಕೆಳಗೆ ಬಲೆ ಹಿಡಿದು ನಿಂತಿದ್ದರು.
ಜನ ಹಾಗೂ ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರೂ ನಿಸಾರ್ ಆತ್ಮಹತ್ಯೆ ವಿಚಾರದಿಂದ ಹಿಂದೆ ಸರಿಯದೇ ಬಲೆ ಹಿಡಿದಿದ್ದ ಜಾಗದಿಂದ ಬೇರೆ ಕಡೆಗೆ ಜಿಗಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ನಿಸಾರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬದುಕುಳಿಯಲಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದರಿಂದ ಕೊಚ್ಚಿ ಮೆಟ್ರೊದಲ್ಲಿ ಇಂದು ಒಂದು ಗಂಟೆಗೂ ಅಧಿಕ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಯುವಕ ವಯಾಡಕ್ಟ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೊಗಳು ಜಾಲತಾಣದಲ್ಲಿ ಹರಿದಾಡಿವೆ. ಮೆಟ್ರೊ ವಯಾಡಕ್ಟ್‌ನಿಂದ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ದೇಶದಲ್ಲಿಯೇ ಇದೇ ಮೊದಲು ಎನ್ನಲಾಗಿದೆ.




