HEALTH TIPS

ಟ್ರಂಪ್‌-ಪುಟಿನ್‌ ಮಾತುಕತೆ: ಜಾಗತಿಕ ಮಹತ್ವ

ಲಂಡನ್‌ (ರಾಯಿಟರ್ಸ್‌): ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಅವರ ನಡುವೆ ಇದೇ 15ರಂದು ನಡೆಯಲಿರುವ ಮಾತುಕತೆಯು ಜಾಗತಿಕ ಮಹತ್ವ ಪಡೆದುಕೊಂಡಿದೆ. ಈ ಬೆಳವಣಿಗೆಯನ್ನು ಕಚ್ಚಾತೈಲ ಬೆಲೆ, ಹೆಚ್ಚುವರಿ ಸುಂಕ, ಮಾರುಕಟ್ಟೆಯ ಸೂಚ್ಯಂಕಗಳ ಏರಿಳಿತ ಸೇರಿದಂತೆ ನಾನಾ ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ.

ರಷ್ಯಾ ಮತ್ತು ಅಮೆರಿಕ ಅಧ್ಯಕ್ಷರ ಬಹುನಿರೀಕ್ಷಿತ ಸಭೆ ಇದೇ 15ರಂದು (ಶುಕ್ರವಾರ) ಅಮೆರಿಕದ ಅಲಾಸ್ಕಾದಲ್ಲಿ ನಿಗದಿಯಾಗಿದ್ದು, ಉಕ್ರೇನ್‌, ಚೀನಾ, ಭಾರತ ಸೇರಿದಂತೆ ವಿವಿಧ ದೇಶಗಳು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ರಷ್ಯಾ- ಉಕ್ರೇನ್‌ ಕದನವನ್ನು ಕೊನೆಗಾಣಿಸುವ ಅಥವಾ ಕದನ ವಿರಾಮ ಘೋಷಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ ಎರಡು ಸೆಂಟ್‌ಗಳಷ್ಟು ಇಳಿಕೆ ಕಂಡಿದೆ ಎನ್ನಲಾಗುತ್ತಿದೆ.

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕವನ್ನು ಈಗಾಗಲೇ ಅಮೆರಿಕ ವಿಧಿಸಿದೆ. ಈ ಮೂಲಕ ಅದು ರಷ್ಯಾದ ಮೇಲೂ ಒತ್ತಡ ಹೇರುತ್ತಿದೆ. ಜತೆಗೆ ಚೀನಾ ಮೇಲೂ ಹೆಚ್ಚುವರಿ ಸುಂಕ ವಿಧಿಸುವ ಕುರಿತು ಚರ್ಚೆ ನಡೆಸುತ್ತಿದೆ.

ಟ್ರಂಪ್‌- ಪುಟಿನ್‌ ಮಾತುಕತೆ ವೇಳೆ ರಷ್ಯಾ- ಉಕ್ರೇನ್‌ ನಡುವೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ಒಪ್ಪಂದ ಏರ್ಪಟ್ಟರೂ, ಭಾರತ ಮತ್ತು ಚೀನಾ ನಿರಾಳವಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಶಾಂತಿ ಒಪ್ಪಂದ ಏರ್ಪಡದೇ ಇದ್ದರೆ ಇನ್ನಷ್ಟು ಸಂಕಷ್ಟ ಎದುರಾಗಬಹುದು ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

ಕದನ ವಿರಾಮ ಅಥವಾ ಶಾಂತಿ ಒಪ್ಪಂದ ಏರ್ಪಟ್ಟರೆ, ಹೆಚ್ಚುವರಿ ಸುಂಕದಿಂದ ಭಾರತಕ್ಕೆ ವಿನಾಯಿತಿ ದೊರೆಯಬಹುದು ಎಂದು 'ಕಾಮರ್ಸ್‌ಬ್ಯಾಂಕ್‌' ವಿಶ್ಲೇಷಿಸಿದೆ.

'ಮಾತುಕತೆ ಫಲಪ್ರದ ಆಗದಿದ್ದರೆ, ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾ ಸೇರಿದಂತೆ ಇತರ ದೇಶಗಳ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಅಮೆರಿಕ ಹೇರಬಹುದು' ಎಂದೂ ಅದು ವಿವರಿಸಿದೆ.

ಚೀನಾಗೆ ನ.10ರವರೆಗೆ ವಿನಾಯಿತಿ: ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾದ ವಿರುದ್ಧ ಅಧಿಕ ಸುಂಕ ವಿಧಿಸುವ ಕ್ರಮವನ್ನು ತಡೆಹಿಡಿದಿರುವ ಅಮೆರಿಕ, ನವೆಂಬರ್‌ 10ರವರೆಗೆ ವಿರಾಮ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries