ಲಖನೌ: ಕೃಷ್ಣ ಜನ್ಮಾಷ್ಟಮಿಯ ಕಾರಣಕ್ಕೆ ಲಕ್ಷಾಂತರ ಭಕ್ತರು ಶನಿವಾರ ಮಥುರಾಕ್ಕೆ ಭೇಟಿ ನೀಡುವ ನಿರೀಕ್ಷೆಯಿದ್ದು, ವೃಂದಾವನ ಸೇರಿದಂತೆ ಉಭಯ ನಗರಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಮೂರು ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ಮಥುರಾ ಮತ್ತು ವೃಂದಾವನ ನಗರಗಳಲ್ಲಿ ನಿಯೋಜಿಸಲಾಗಿದೆ.
ಜನರ ಮೇಲೆ ನಿಗಾ ಇಡಲು 15 ಟವರ್ ನಿರ್ಮಿಸಲಾಗಿದ್ದು, ಡ್ರೋನ್ ಕಣ್ಗಾವಲಿಗೂ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
300ಕ್ಕೂ ಅಧಿಕ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶ್ರೀ ಕೃಷ್ಣ ಜನ್ಮಭೂಮಿ, ದ್ವಾರಕಾಧೀಶ ದೇಗುಲ ಮತ್ತು ಬಂಕೆ ಬಿಹಾರಿ ದೇಗುಲಗಳಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಮೂರು ದಿನ ನಡೆಯಲಿರುವ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಶನಿವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಮಥುರಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




