ವಾಷಿಂಗ್ಟನ್: 'ಅಮೆರಿಕವು ರಷ್ಯಾದಿಂದ ರಾಸಾಯನಿಕಗಳು ಮತ್ತು ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತಿದೆ ಎಂಬ ಬಗ್ಗೆ ತನಗೆ ತಿಳಿದಿಲ್ಲ' ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದ ಟ್ರಂಪ್, ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿದ್ದರು.
ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸಿದರೆ ಸುಂಕವನ್ನು ಮತ್ತಷ್ಟು ಹೆಚ್ಚಿಸುವುದಾಗಿಯೂ ತಿಳಿಸಿದ್ದರು.
ಈ ಕುರಿತು ಆ. 4ರಂದು ಹೇಳಿಕೆ ಬಿಡುಗಡೆ ಮಾಡಿದ್ದ ಭಾರತ, ರಷ್ಯಾದಿಂದ ಅಮೆರಿಕವು ತನ್ನ ಪರಮಾಣು ಉದ್ಯಮಕ್ಕೆ ಬೇಕಾದ ಯುರೇನಿಯಂ ಹೆಕ್ಸಾಫ್ಲೋರೈಡ್, ಇವಿ ಉದ್ಯಮಕ್ಕೆ ಬೇಕಾದ ಪಲ್ಲಾಡಿಯಮ್ ಅನ್ನು ಆಮದು ಮಾಡಿಕೊಳ್ಳುತ್ತಿದೆ. ರಾಸಾಯನಿಕಗಳು ಮತ್ತು ರಸಗೊಬ್ಬರವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದೆ' ಎಂದು ಹೇಳಿತ್ತು.
ಈ ಬಗ್ಗೆ ಶ್ವೇತಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
'ನನಗೆ ಅದರ ಬಗ್ಗೆ ಏನೂ ತಿಳಿದಿಲ್ಲ. ನಾವು ಪರಿಶೀಲಿಸುತ್ತೇವೆ' ಎಂದಿದ್ದಾರೆ.
24 ಗಂಟೆಯೊಳಗೆ ಮತ್ತಷ್ಟು ಸುಂಕ ಹೆಚ್ಚಳ: ಟ್ರಂಪ್
'ಭಾರತ ಉತ್ತಮ ವ್ಯಾಪಾರ ಪಾಲುದಾರ ದೇಶವಲ್ಲ. ಭಾರತ ನಮ್ಮೊಂದಿಗೆ ಅನೇಕ ವ್ಯಾಪಾರವನ್ನು ನಡೆಸುತ್ತಿದೆ. ಆದರೆ, ನಾವು ಅವರೊಂದಿಗೆ ವ್ಯಾಪಾರ ಮಾಡುವುದಿಲ್ಲ. ಹೀಗಾಗಿ ನಾವು ಶೇ 25 ರಷ್ಟು ಸುಂಕ ಹೇರಿದ್ದೇವೆ. ಬಹುಶಃ ಮುಂದಿನ 24 ಗಂಟೆಯಲ್ಲಿ ಗಣನೀಯವಾಗಿ ಅದನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ' ಎಂದು ಟ್ರಂಪ್ ಮಂಗಳವಾರ ಹೇಳಿದ್ದರು.
'ನಾವು ಅವರೊಂದಿಗೆ ಅತಿ ಚಿಕ್ಕ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಅದಕ್ಕೆ ಭಾರತ ವಿಧಿಸುತ್ತಿರುವ ಅತಿಯಾದ ಸುಂಕವೇ ಕಾರಣ' ಎಂದು ಹೇಳಿದ್ದಾರೆ.




