HEALTH TIPS

ನಮ್ಮದೇ ರಾಕೆಟ್‌ನಲ್ಲಿ ನಮ್ಮ ನೆಲದವರೇ ಅತಿ ಶೀಘ್ರದಲ್ಲಿ ಬಾಹ್ಯಾಕಾಶಕ್ಕೆ: ಶುಕ್ಲಾ

 ನವದೆಹಲಿ: 'ನಮ್ಮ ನೆಲದಿಂದಲೇ ಒಬ್ಬರು, ನಾವೇ ತಯಾರಿಸಿದ ಕ್ಯಾಪ್ಸೂಲ್‌ನಲ್ಲಿ ಕುಳಿತು, ನಮ್ಮದೇ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ದಿನ ಅತ್ಯಂತ ಸನಿಹದಲ್ಲಿದೆ' ಎಂದು ಗಗನಯಾನಿ ಗ್ರೂಪ್ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಗುರುವಾರ ಹೇಳಿದ್ದಾರೆ.

ನಾಸಾ ಜತೆಗೂಡಿ ಇಸ್ರೊ ನಡೆಸಿದ ಆಕ್ಸಿಯಂ-4 ಬಾಹ್ಯಾಕಾಶ ಯಾನ ಯೋಜನೆಯಲ್ಲಿ ಶುಭಾಂಶು ಶುಕ್ಲಾ ಅವರು ಇತರ ಮೂವರು ಗಗನಯಾನಿಗಳೊಂದಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವಾಸ ಮಾಡಿ, ಕೆಲ ಸಂಶೋಧನೆಗಳನ್ನು ಕೈಗೊಂಡು ಯಶಸ್ವಿಯಾಗಿ ಇತ್ತೀಚೆಗೆ ಮರಳಿದರು.

ಇದಾದ ನಂತರ ಸ್ವದೇಶಕ್ಕೆ ಬಂದಿಳಿದ ಶುಭಾಂಶು ಅವರು ತಮ್ಮ ಯೋಜನೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.

'ಅಂತರರಾಷ್ಟ್ರೀಯ ಬಾಹ್ಯಾಕಾಶ ಯೋಜನೆಯ ಅನುಭವಕ್ಕೆ ಬೆಲೆ ಕಟ್ಟಲಾಗದು. ಅದು ಇನ್ನಾವುದೇ ತರಬೇತಿಗಿಂತಲೂ ಉತ್ತಮವಾಗಿತ್ತು' ಎಂದ ಅವರು, 1984ರಲ್ಲಿ ಬಾಹ್ಯಾಕಾಶ ಯಾನ ಕೈಗೊಂಡಿದ್ದ ಭಾರತದ ಗಗನಯಾನಿ ರಾಕೇಶ್ ಶರ್ಮಾ ಅವರು ಹೇಳಿದಂತೆ, 'ಸಾರೇ ಜಹಾಂಸೆ ಅಚ್ಚಾ (ಜಗತ್ತಿನ ಎಲ್ಲಕ್ಕಿಂತಲೂ ಸುಂದರ) ಎಂಬ ಸಾಲುಗಳನ್ನೇ ಪುನರುಚ್ಚರಿಸಿದ್ದಾರೆ.

'ಆಕ್ಸಿಯಂ-4ನ ಈ ಯೋಜನೆಯು ಭಾರತ ಕೈಗೊಳ್ಳುತ್ತಿರುವ ಗಗನಯಾನ ಯೋಜನೆಗೆ ಇದು ನೆರವಾಗಲಿದೆ. ಕಳೆದ ಒಂದು ವರ್ಷದಿಂದ ಬಾಹ್ಯಾಕಾಶ ಯಾನಕ್ಕಾಗಿ ಸಾಕಷ್ಟು ತರಬೇತಿ ಪಡೆದಿದ್ದೇನೆ' ಎಂದಿದ್ದಾರೆ.

'ನೀವು ಎಷ್ಟೇ ತರಬೇತಿ ಪಡೆದು ಸದೃಢರಾಗಿದ್ದೀರಿ ಎಂದೇ ಭಾವಿಸಿ. ಆದರೆ ರಾಕೆಟ್‌ ಒಳಗೆ ಕೂತು, ಅದು ಬೆಂಕಿ ಉಗುಳುತ್ತಾ ಮೇಲಕ್ಕೆ ಚಿಮ್ಮುವಾಗಿನ ಅನುಭವವೇ ಬೇರೆ' ಎಂದು ಶುಭಾಂಶು ಶುಕ್ಲಾಾ ಹೇಳಿದ್ದಾರೆ.

'ಆ ಅನುಭವ ಹೇಗಿರುತ್ತದೆ ಎಂಬುದು ನನ್ನ ಊಹೆಗೂ ಮೀರಿದ್ದಾಗಿತ್ತು. ಕೆಲ ಸೆಕೆಂಡುಗಳ ಕಾಲ ನನ್ನ ಗಮನ ರಾಕೆಟ್ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಕೆಲ ಸಮಯದ ನಂತರ ವಾಸ್ತವದ ಅರಿವಾಯಿತು. ಅಲ್ಲಿಂದ, ಕಡಲಿಗೆ ಬಂದು ಬೀಳುವವರೆಗೂ ಅನುಭವ ಊಹೆಗೂ ಮೀರಿದ್ದು. ಅದೊಂದು ಅದ್ಭುತ ಮತ್ತು ರೋಮಾಂಚಕಾರಿ ಅನುಭವ. ಅದನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ನನ್ನ ಈ ಮಾತುಗಳಲ್ಲೇ ನೀವು ಅದನ್ನು ಊಹಿಸಿಕೊಳ್ಳಬಹುದು' ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries