HEALTH TIPS

ಸಂಸದೀಯ ಸಮಿತಿಗಳ ಮಹತ್ವ ಹೆಚ್ಚುತ್ತಿದೆ: ಓಂ ಬಿರ್ಲಾ

ಭುವನೇಶ್ವರ್: ಸಂಸತ್ತು ಮತ್ತು ವಿಧಾನಮಂಡಳಗಳಲ್ಲಿ ಚರ್ಚೆ ಹಾಗೂ ಸಂವಾದಗಳ ಗುಣಮಟ್ಟ ಕುಸಿಯುತ್ತಿರುವ ಹೊತ್ತಿನಲ್ಲಿ ಸಂಸದೀಯ ಸಮಿತಿಗಳ ಪಾತ್ರ ಹೆಚ್ಚಾಗುತ್ತಿದೆ. ಪಕ್ಷಪಾತದ, ವಿಭಜನೆಯ ರಾಜಕಾರಣ ಮೀರಿ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಅವರು ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಒಡಿಶಾ ರಾಜಧಾನಿಯಲ್ಲಿ ಆರಂಭವಾದ ಸಂಸತ್ತು ಮತ್ತು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ವಿಧಾನಮಂಡಲಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಗಳ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಬಿರ್ಲಾ ಅವರು ಉದ್ಘಾಟಿಸಿದರು. ಆನಂತರ ವಿವಿಧ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಗಳ ಅಧ್ಯಕ್ಷರು, ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

'ಸಮಿತಿಗಳಲ್ಲಿರುವ ವಿವಿಧ ಪಕ್ಷಗಳ ಪ್ರತಿನಿಧಿಗಳು ಇಲಾಖೆಗಳ ಕಾರ್ಯವೈಖರಿ ಮೇಲೆ ನಿಗಾ ಇಡುತ್ತಾರೆ. ಸ್ವಾತಂತ್ರ್ಯದ ಆರಂಭದಿಂದಲೂ ಈ ಸಮಿತಿಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ. ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹಂಚಿಕೆ ಮಾಡಲಾದ ಅನುದಾನ ಈ ವರ್ಗಗಳ ಸಬಲೀಕರಣಕ್ಕೆ ಬಳಕೆಯಾಗುತ್ತಿದೆಯೇ ಎಂಬ ಪರಾಮರ್ಶೆ ನಡೆಸುವ ಜೊತೆಗೆ ಸೂಕ್ತ ಶಿಫಾರಸುಗಳನ್ನೂ ಮಾಡುತ್ತವೆ' ಎಂದರು.

ಇತ್ತೀಚೆಗೆ ಸಂಸತ್‌ ಅಧಿವೇಶನದಲ್ಲಿ ಪ್ರತಿಭಟನೆ, ಗದ್ದಲಗಳಿಗೆ ಕಲಾಪದ ಸಮಯ ವ್ಯರ್ಥವಾದ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಭಾಧ್ಯಕ್ಷರು, 'ಸದನದಲ್ಲಿ ಬಳಸುವ ಪದಗಳ ಆಯ್ಕೆ ಮತ್ತು ನಡವಳಿಕೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ' ಎಂದು ಹೇಳಿದರು.

'ಪರಿಶಿಷ್ಟ ಸಮುದಾಯಗಳಿಗೆ ಶಿಕ್ಷಣ ಇನ್ನೂ ಸಮರ್ಪಕವಾಗಿ ತಲುಪಿಲ್ಲ. ಶಿಕ್ಷಣವು ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಯ ತಳಹದಿ. ಸಮಿತಿಗಳು ಹೊಸ ಯೋಜನೆ ಅಥವಾ ಹಾಲಿ ಯೋಜನೆಗಳಲ್ಲಿ ಬದಲಾವಣೆ ತರಲು ಶಿಫಾರಸು ಮಾಡಬೇಕು' ಎಂದು ಸಲಹೆ ನೀಡಿದರು.

ಒಡಿಶಾ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ, ಕೇಂದ್ರ ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಜುಯಲ್‌ ಓರಮ್‌, ರಾಜ್ಯಸಭೆ ಉಪ ಸಭಾಪತಿ ಹರಿವಂಶ ಸಿಂಗ್‌ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.

ಒಡಿಶಾ ವಿಧಾನಸಭೆ ಅಧ್ಯಕ್ಷೆ ಸುರಮ ಪಾಡಿ, 19 ರಾಜ್ಯಗಳ ಸಮಿತಿಗಳ ಮುಖ್ಯಸ್ಥರು, ಸದಸ್ಯರು ಸೇರಿದಂತೆ ದೇಶದ ವಿವಿಧೆಡೆಯ 200 ಪ್ರತಿನಿಧಿಗಳು ಭಾಗವಹಿಸಿದ್ದರು.

ಎರಡು ದಿನಗಳ ಸಮ್ಮೇಳನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಂವಿಧಾನಿಕ ಹಕ್ಕು ರಕ್ಷಣೆ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಹಾಗೂ ಸಶಕ್ತೀಕರಣಕ್ಕೆ ಅನುಸರಿಸಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸುರಮ ಪಾಡಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries