ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನಕ್ಕಾಡಿನ ಆಸುಪಾಸು ಮನೆಯೊಳಗೆ ನಿದ್ರಿಸುತ್ತಿದ್ದ ಒಂಬತ್ತರ ಹರೆಯದ ಬಾಲಕಿಯನ್ನು ಅಪಹರಿಸಿ, ಮೈಮೇಲಿದ್ದ ಚಿನ್ನಾಭರಣ ಕಸಿದು ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣದ ಅಪರಾಧಿ, ಕೊಡಗು ನಾಪೊಕ್ಲು ನಿವಾಸಿ ಪಿ.ಎ ಸಲೀಂ(40) ಎಂಬಾತನಿಗೆ ಹೊಸದುರ್ಗ ವಿಶೇಷ ಕ್ಷಿಪ್ರ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ ಸುರೇಶ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ. ಬಾಲಕಿ ಮೈಮೇಲಿಂದ ಎಗರಿಸಿದ್ದ ಚಿನ್ನಾಭರಣ ಮಾರಾಟ ಮಾಡಲು ಸಹಕರಿಸಿದ ಸಲೀಂ ಸಹೋದರಿ, ಪ್ರಕರಣದ ಎರಡನೇ ಅಪರಾಧಿ, ಕೂತುಪರಂಬ ನಿವಾಸಿ ಸುಹೈಬಾ(21)ಗೆ ಸೋಮವಾರ ನ್ಯಾಯಾಲಯ ಕಲಾಪು ಕೊನೆಗೊಳ್ಳುವಲ್ಲಿ ವರೆಗೆ ನಿಲ್ಲುವ ಶಿಕ್ಷೆ ವಿಧಿಸಲಾಗಿತ್ತು. ಪ್ರಕರಣದಲ್ಲಿ ಇಬ್ಬರೂ ತಪ್ಪಿತಸ್ಥರೆಂದು ನ್ಯಾಯಾಲಯ ಶನಿವಾರ ಪತ್ತೆಹಚ್ಚಿದ್ದು, ಸೋಮವಾರಕ್ಕೆ ತೀರ್ಪು ಮುಂದೂಡಿತ್ತು.
2024 ಮೇ 15ರಂದು ನಸುಕಿಗೆ ಬಾಲಕಿಯ ಅಜ್ಜ ಹಾಲು ಕರೆಯಲು ಹೊರಗೆ ತೆರಳುತ್ತಿದ್ದಂತೆ, ಆರೋಪಿ ಮನೆಯೊಳಗೆ ನುಗ್ಗಿ, ನಿದ್ರಿಸುತ್ತಿದ್ದ ಬಾಲಕಿಯನ್ನು ಹೆಗಲಿಗೇರಿಸಿ ಸುಮಾರು 500ಮೀ. ದೂರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ, ಮೈಮೇಲಿನ ಚಿನ್ನಾಭರಣ ಕಸಿದು, ದೌರ್ಜನ್ಯವೆಸಗಿ ರಸ್ತೆ ಬದಿ ಉಪೇಕ್ಷಿಸಿ ಪರಾರಿಯಾಗಿದ್ದನು. ಬಾಲಕಿ ಸನಿಹದ ಮನೆಗೆ ತೆರಳಿ ಕಾಲಿಂಗ್ ಬೆಲ್ ಅದುಮಿ ಮನೆಯವರನ್ನು ಎಬ್ಬಿಸಿ, ಘಟನೆ ಬಗ್ಗೆ ವಿವರಿಸಿದ್ದ ಹಿನ್ನೆಲೆಯಲ್ಲಿ, ಮನೆಯವರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ನಂತರ ಪೊಲೀಸರಿಗೆ ದೂರು ನೀಡಿದ್ದರು.ಆಂಧ್ರದಿಂದ ಸೆರೆ:
ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಆರೋಪಿ, ಮೊಬೈಲ್ ಬಳಕೆಯನ್ನೂ ನಿಯಂತ್ರಿಸಿದ್ದನು. ಕೊಡಗಿಗೆ ತೆರಳಿದರೆ, ತಾಯಿ ಮೊಬೈಲ್ ಹಾಗೂ ಕಾಞಂಗಾಡಿನಲ್ಲಿ ಪತ್ನಿಯ ಮೊಬೈಲ್ ಮಾತ್ರ ಬಳಸಿಕೊಳ್ಳುತ್ತಿದ್ದನು. ಪತ್ನಿಯೊಂದಿಗೆ ರಾತ್ರಿ ವೇಳೆ ಮೊಬೈಲ್ ಸಂಭಾಷಣೆ ನಡೆಸುವ ಮಧ್ಯೆ ಪೊಲೀಸರು ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ಕಾರ್ಯಾಚರಣೆಯಿಂದ ಆರೋಪಿ ಆಂಧ್ರಪ್ರದೇಶದಲ್ಲಿರುವ ಬಗ್ಗೆ ಮಾಹಿತಿ ಪಡೆದು, ಅಲ್ಲಿಂದ ಆತನನ್ನು ವಶಕ್ಕೆ ಪಡೆದುಕೊಂಡಿದ್ದರು.
ಪ್ರಕರಣದ ತನಿಖೆ ನಿಟ್ಟಿನಲ್ಲಿ 165ಕ್ಕೂ ಹೆಚ್ಚು ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಸಂಗ್ರಹಿಸಿ, ಇವುಗಳಲ್ಲಿ ಲಭಿಸಿದ ಚಿತ್ರ ಕೇಂದ್ರೀಕರಿಸಿ ಪೊಲೀಸರು ಈತನ ರೇಖಾ ಚಿತ್ರವನ್ನೂ ಬಿಡುಗಡೆಗೊಳಿಸಿದ್ದರು. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಚಿತ್ರದಲ್ಲಿ ಮುಖದ ಚಹರೆ ಗೊತ್ತಾಗದಿದ್ದರೂ, ಈತ ಧರಿಸಿದ್ದ ಬಟ್ಟೆ ಹಾಗೂ ಈತನ ನಡಿಗೆ ಆರೋಪಿಯ ಸುಳಿವು ಪತ್ತೆಹಚ್ಚಲು ಸಹಕಾರಿಯಾಗಿತ್ತು. ಆರೋಪಿ ಪತ್ತೆಗಾಗಿ ಡಿವೈಎಸ್‍ಪಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿತ್ತು.





