ಹೈದರಾಬಾದ್: ಸುಮಾರು 40 ವರ್ಷಗಳಿಂದ ಕ್ರಾಂತಿಕಾರಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಹಾಗೂ ನಿಷೇಧಿತ ಮಾವೋವಾದಿ (ಸಿಪಿಐ) ಸಂಘಟನೆಯ ಹಿರಿಯ ನಾಯಕರಾದ ಸುನೀತಾ ಅಲಿಯಾಸ್ ಭದ್ರಿ ಮತ್ತು ಚೆನ್ನುರಿ ಹರೀಶ್ ಅಲಿಯಾಸ್ ರಾಮಣ್ಣ ಗುರುವಾರ ಪೊಲೀಸರಿಗೆ ಶರಣಾಗಿದ್ದಾರೆ.
ತೆಲಂಗಾಣದ ರಾಚಕೊಂಡ ಪೊಲೀಸ್ ಆಯುಕ್ತ ಜಿ. ಸುಧೀರ್ ಬಾಬು ಅವರ ಸಮ್ಮುಖದಲ್ಲಿ ಭದ್ರಿ ಹಾಗೂ ರಾಮಣ್ಣ ಶರಣಾದರು.
ಕಾಕರಾಲ ಮೂಲದ ಸುನೀತಾ ಅಲಿಯಾಸ್ ಬದ್ರಿ ಅವರು ಮಾವೋವಾದಿ ರಾಜ್ಯ ಸಮಿತಿ ಹಾಗೂ ದಂಡಕಾರಣ್ಯ ವಿಶೇಷ ವಲಯದ ಹಿರಿಯ ಸದಸ್ಯೆಯಾಗಿದ್ದರು. ಚೆನ್ನುರಿ ಹರೀಶ್ ಅಲಿಯಾಸ್ ರಾಮಣ್ಣ ಮಾವೋವಾದಿ ತೆಲಂಗಾಣ ರಾಜ್ಯ ಸಮಿತಿಯ ಸದಸ್ಯರಾಗಿದ್ದರು.
ಶರಣಾಗುವ ನಕ್ಸಲರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ತೆಲಂಗಾಣ ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಇವರು ಶರಣಾಗಿದ್ದಾರೆ. ಇಬ್ಬರೂ ತಮ್ಮ ಕುಟುಂಬದೊಡನೆ ಶಾಂತ ಜೀವನ ನಡೆಸಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.




