ಕಾಸರಗೋಡು: ನಕಲಿ ಪುರಾವೆಗಳು ಮತ್ತು ಆರೋಪಗಳ ಮೂಲಕ ಶ್ರೀ ಧರ್ಮಸ್ಥಳ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯುಂಟುಮಾಡಲು ಯತ್ನಿಸಿದ ಯೂಟ್ಯೂಬರ್ ಮನಾಫಿಯನ್ನು ಬಂಧಿಸಿ, ಇದರ ಹಿಂದಿನ ಗೂಢಾಲೋಚನೆ ಬಹಿರಂಗೊಳಿಸಲು ಕೇರಳ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ವಲಯ ಸಮಿತಿ ಅಧ್ಯಕ್ಷ, ವಕೀಲ ಕೆ. ಶ್ರೀಕಾಂತ್ ಸುದ್ದಿಗೋಷ್ಠೀಯಲ್ಲಿ ಆಗ್ರಹಿಸಿದ್ದಾರೆ.
ಅನನ್ಯ ಭಟ್ ತನ್ನ ಪುತ್ರಿ ಹಾಗೂ ಈಕೆ ಅತ್ಯಾಚಾರಕ್ಕೀಡಾಗಿದ್ದಾಳೆ ಎಂಬುದಾಗಿ ಬಿಂಬಿಸಿ, ಸುಳ್ಳು ದೂರು ನೀಡಿರುವ ಸುಜಾತಾ ಭಟ್, ಮುಸಕುಧಾರಿ ವ್ಯಕ್ತಿ ಹಾಗೂ ಈತನಿಗೆ ಪ್ರಚೋದನೆ ನೀಡಿರುವ ಎಲ್ಲ ವ್ಯಕ್ತಿಗಳನ್ನೂ ಗುರುತಿಸಿ ಶಿಕ್ಷೆಗೊಳಪಡಿಸಬೇಕು.
ಧರ್ಮಸ್ಥಳದ ವಿರುದ್ಧದ ಸುಳ್ಳು ಪ್ರಚಾರದ ಹಿಂದೆ ಹಿಂದೂ ನಂಬಿಕೆಗಳನ್ನು ನಾಶಮಾಡುವ ವ್ಯವಸ್ಥಿತ ಸಂಚಾಇದ್ದು, ಈ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನವೂ ನಡೆಯುತ್ತಿದೆ. ಈ ಸಂಚಿನಲ್ಲಿ ಮನಾಫ್, ಸಮೀರ್ ಮತ್ತು ಇತರರ ಪಾತ್ರ ಸ್ಪಷ್ಟವಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಧರ್ಮಸ್ಥಳದಲ್ಲಿ ಅತ್ಯಾಚಾರ ಮತ್ತು ಕೊಲೆ ನಡೆದಿರುವುದಾಗಿ ಸುಳ್ಳು ಆರೋಪ ನಡೆಸಿಕೊಂಡು ಬರುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಹಾಗೂ ಮಾಸ್ಕ್ ಮ್ಯಾನ್ ಎಂದು ಕರೆಯಲ್ಪಡುವ ಸಿ.ಎನ್. ಚಿನ್ನಯ್ಯ ರೂಪಿಸಿದ ಅಂತಾರಾಜ್ಯ ಪಿತೂರಿ ಇದಾಗಿದೆ ಎಂದೂ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಉಪಸ್ಥಿತರಿದ್ದರು.

