HEALTH TIPS

ಶ್ವೇತಭವನದಲ್ಲಿ ಝೆಲೆನ್‌ಸ್ಕಿ, ಐರೋಪ್ಯ ಒಕ್ಕೂಟದ ನಾಯಕರ ಜತೆ ಟ್ರಂಪ್ ಸಭೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹಾಗೂ ಐರೋಪ್ಯ ಒಕ್ಕೂಟದ ನಾಯಕರ ಜತೆ ಶ್ವೇತಭವನದಲ್ಲಿ ಸೋಮವಾರ ಮಹತ್ವದ ಸಭೆ ನಡೆಸಿದರು.

ಉಕ್ರೇನ್‌- ರಷ್ಯಾ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್‌ ಅವರು ನಡೆಸುತ್ತಿರುವ ಪ್ರಯತ್ನದ ಭಾಗವಾಗಿ ನಡೆದ ಸಭೆ 'ರಚನಾತ್ಮಕ'ವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಸೋಮವಾರದ ಮಾತುಕತೆಯು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರನ್ನೂ ಒಳಗೊಂಡಂತೆ ತ್ರಿಪಕ್ಷೀಯ (ಟ್ರಂಪ್- ಪುಟಿನ್- ಝೆಲೆನ್‌ಸ್ಕಿ) ಮಾತುಕತೆಗೆ ಹಾದಿಯೊದಗಿಸಬಹುದು ಎಂಬ ಒಲವನ್ನು ಟ್ರಂಪ್‌ ಹಾಗೂ ಝೆಲೆನ್‌ಸ್ಕಿ ಸಭೆಯ ಆರಂಭದಲ್ಲಿ ವ್ಯಕ್ತಪಡಿಸಿದರು.

'ಈ ಮಾತುಕತೆಯಲ್ಲಿ ಎಲ್ಲವೂ ಲೆಕ್ಕಾಚಾರದಂತೆ ನಡೆದರೆ, ತ್ರಿಪಕ್ಷೀಯ ಸಭೆ ನಡೆಯಲಿದೆ' ಎಂದು ಟ್ರಂಪ್‌ ಹೇಳಿದರು. 'ಯುದ್ಧವನ್ನು ನಿಲ್ಲಿಸಲು ನಾವು ರಷ್ಯಾ ಮತ್ತು ಉಕ್ರೇನ್‌ ಜತೆ ಸೇರಿ ಕೆಲಸ ಮಾಡಲಿದ್ದೇವೆ. ಮೂವರೂ ಜತೆಯಾಗಿ ಮಾತುಕತೆ ನಡೆಸಿದರೆ ಯುದ್ಧ ಕೊನೆಗೊಳಿಸುವ ಅವಕಾಶವಿರುತ್ತದೆ ಎಂದು ಭಾವಿಸಿದ್ದೇನೆ' ಎಂದು ತಿಳಿಸಿದರು.

ಝೆಲೆನ್‌ಸ್ಕಿ ಕೂಡಾ ತ್ರಿಪಕ್ಷೀಯ ಮಾತುಕತೆ ಬಗ್ಗೆ ತಮ್ಮ ಒಲವು ವ್ಯಕ್ತಪಡಿಸಿದರು. 'ಅಮೆರಿಕದ ಅಧ್ಯಕ್ಷರು ಹೇಳಿದಂತೆ ನಾವು ತ್ರಿಪಕ್ಷೀಯ ಮಾತುಕತೆಗೆ ಸಿದ್ಧರಿದ್ದೇವೆ. ಅಂತಹ ಮಾತುಕತೆ ನಡೆದರೆ ಒಳ್ಳೆಯದು' ಎಂದರು. 'ಹತ್ಯೆಗಳನ್ನು ನಿಲ್ಲಿಸಲು ಮತ್ತು ಈ ಯುದ್ಧವನ್ನು ಕೊನೆಗೊಳಿಸಲು ವೈಯಕ್ತಿಕವಾಗಿ ನೀವು ನಡೆಸುತ್ತಿರುವ ಪ್ರಯತ್ನಗಳಿಗೆ ತುಂಬಾ ಧನ್ಯವಾದಗಳು' ಎಂದು ಟ್ರಂಪ್‌ ಅವರನ್ನು ಶ್ಲಾಘಿಸಿದರು.

ಯುದ್ಧವನ್ನು ಅಂತ್ಯಗೊಳಿಸುವ ಸಲುವಾಗಿ ಟ್ರಂಪ್‌ ಮತ್ತು ಪುಟಿನ್‌ ನಡುವೆ ಅಲಾಸ್ಕದಲ್ಲಿ ಭಾನುವಾರ ಸಭೆ ನಡೆದಿತ್ತು. ಅದರ ಬೆನ್ನಲ್ಲೇ ಟ್ರಂಪ್‌ ಅವರು ಝೆಲೆನ್‌ಸ್ಕಿ ಜತೆ ತರಾತುರಿಯಲ್ಲಿ ಸಭೆ ನಡೆಸಿದ್ದಾರೆ.

'ಯುದ್ಧವನ್ನು ಕೊನೆಗೊಳಿಸುವ ಸಂಬಂಧ ಮಾತುಕತೆ ನಡೆಸಲು ಕದನ ವಿರಾಮ ಅಗತ್ಯವೆಂದು ಭಾವಿಸುವುದಿಲ್ಲ' ಎಂದು ಟ್ರಂಪ್‌ ಭಾನುವಾರ ಹೇಳಿದ್ದರು.

ಆತ್ಮೀಯ ಸ್ವಾಗತ: ಮಾತುಕತೆಗೆ ಓವಲ್‌ ಕಚೇರಿಗೆ ಬಂದ ಝೆಲೆನ್‌ಸ್ಕಿ ಅವರನ್ನು ಟ್ರಂಪ್‌ ಆತ್ಮೀಯವಾಗಿ ಬರಮಾಡಿಕೊಂಡರು.

ಆರು ತಿಂಗಳ ಹಿಂದೆ ಭೇಟಿಯಾಗಿದ್ದಾಗ ಟ್ರಂಪ್‌ ಮತ್ತು ಝೆಲೆನ್‌ಸ್ಕಿ ಪರಸ್ಪರ ಮಾತಿನ ಚಕಮಕಿ ನಡೆಸಿದ್ದರು. ಮಾತುಕತೆಯು ಜಗಳದ ಸ್ವರೂಪ ಪಡೆದದ್ದು ಜಾಗತಿಕವಾಗಿ ಭಾರಿ ಚರ್ಚೆಗೆ ಕಾರಣವಾಗಿತ್ತು.

'ಪುಟಿನ್‌ ಜತೆ ಮಾತನಾಡುವೆ'

ಝೆಲೆನ್‌ಸ್ಕಿ ಜತೆಗಿನ ಸಭೆ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರಿಗೆ ಕರೆ ಮಾಡಿ ಮಾತನಾಡುವುದಾಗಿ ಟ್ರಂಪ್‌ ಹೇಳಿದ್ದಾರೆ. ಈ ವೇಳೆ ಮೂವರೂ ನಾಯಕರ ಮಧ್ಯೆ ಮಾತುಕತೆ ನಡೆಯಲಿದೆಯೇ ಎಂಬುದು ಖಚಿತವಾಗಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries